ADVERTISEMENT

ಬಫರ್‌ ವಲಯ ಕಡಿತ ಕೆರೆಗಳ ನಾಶಕ್ಕೆ ಬುನಾದಿ: ಪ್ರಕಾಶ್‌ ಬೆಳವಾಡಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 14:37 IST
Last Updated 25 ಆಗಸ್ಟ್ 2025, 14:37 IST
ಪ್ರಕಾಶ್‌ ಬೆಳವಾಡಿ
ಪ್ರಕಾಶ್‌ ಬೆಳವಾಡಿ   

ಬೆಂಗಳೂರು: ರಾಜ್ಯದಲ್ಲಿರುವ ಕೆರೆಗಳಿಗೆ ಏಕರೂಪದಲ್ಲಿದ್ದ 30 ಮೀಟರ್‌ ಬಫರ್ ವಲಯ(ಸಂರಕ್ಷಿತ ಪ್ರದೇಶ) ಕಡಿತಗೊಳಿಸಲು ಅವಕಾಶ ಕಲ್ಪಿಸುವ ತಿದ್ದುಪಡಿಯು ಕೆರೆಗಳ ನಾಶಕ್ಕೆ ಕಾರಣವಾಗಲಿದೆ. ಮೇಲ್ನೋಟಕ್ಕೆ ವಿರೋಧಿಸಿದಂತೆ ನಟಿಸುವ ವಿರೋಧ ಪಕ್ಷಗಳ ಸದಸ್ಯರು ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ, ವಿನಾಶದಲ್ಲಿ ಪಾಲುದಾರರಾಗಿದ್ದಾರೆ ಎಂದು ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಆರೋಪಿಸಿದರು.

ಬೆಂಗಳೂರು ಟೌನ್‌ಹಾಲ್ ಸಂಘಟನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲವು ವರ್ಷಗಳ ಹಿಂದೆ ಮಳೆ ಬಂದು ನಗರದಲ್ಲಿ ಪ್ರವಾಹ ಉಂಟಾದರೆ ದೊಡ್ಡ ಸುದ್ದಿ. ಈಗ ಬೆಂಗಳೂರು ಮಾತ್ರವಲ್ಲ, ದೇಶದ ಎಲ್ಲ ನಗರಗಳಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯ ಸುದ್ದಿಯಾಗಿದೆ. ಈಗಲಾದರೂ ಪ್ರವಾಹ ಕಡಿಮೆ ಮಾಡುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸುವ ಬದಲು ಕೆರೆಗಳ ಬಫರ್‌ ವಲಯ ಕಡಿಮೆ ಮಾಡಿ ಪ್ರವಾಹ ಹೆಚ್ಚಿಸಲು ಮುಂದಾಗಿರುವುದು ಆತಂಕಕಾರಿ ವಿಚಾರ. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಬಫರ್‌ ವಲಯ ಕಡಿತ ಮಾಡುವುದರ ವಿರುದ್ಧ ಇರುವಂತೆ ನಟಿಸುತ್ತಿವೆ. ವಿಧಾನ ಪರಿಷತ್‌ನಲ್ಲಿ ಈ ಮಸೂದೆ ಅಂಗೀಕಾರವಾಗದಂತೆ ಮಾಡಬಹುದಿತ್ತು. ಆದರೆ, ಸಭಾತ್ಯಾಗ ಮಾಡಿ, ಅಂಗೀಕಾರವಾಗುವಂತೆ ಮಾಡಿದ್ದಾರೆ. ಇವರು ಅಧಿಕಾರಕ್ಕೆ ಬಂದರೆ ಇನ್ನಷ್ಟು ಹಾನಿ ಉಂಟಾಗುವ ಯೋಜನೆ ತರುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಬೆಂಗಳೂರು ಎನ್‌ವಿರಾನ್‌ಮೆಂಟ್‌ ಟ್ರಸ್ಟ್‌ನ ದತ್ತಾತ್ರೇಯ ಟಿ. ದೇವರೆ ಮಾತನಾಡಿ, ‘ರಿಯಲ್‌ ಎಸ್ಟೇಟ್‌ ಹಿತಾಸಕ್ತಿಗಾಗಿ ಬಫರ್‌ ವಲಯ ಕಡಿಮೆ ಮಾಡಲು ನಿರ್ಧರಿಸಲಾಗಿದೆ’ ಎಂದು ಆರೋಪಿಸಿದರು.

ಸಿವಿಕ್‌ ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್‌ ಮಾತನಾಡಿ, ‘ಕಾನೂನು ಪ್ರಕಾರ ಪರಿಸರ ಉಳಿಸಲು ಕ್ರಮ ಕೈಗೊಳ್ಳಬೇಕು. ಆದರೆ, ಆಡಳಿತ ಪಕ್ಷ, ವಿರೋಧ ಪಕ್ಷಗಳು ಸೇರಿ ಕೆರೆ ನುಂಗಲು ಯೋಜನೆ ರೂಪಿಸುತ್ತಿವೆ. ಗ್ರೇಟರ್‌ ಬೆಂಗಳೂರು ವಿರುದ್ಧ ಈಗಾಗಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದೇವೆ. ಬಫರ್‌ ವಲಯ ಕಡಿತಗೊಳಿಸುವುದರ ವಿರುದ್ಧವೂ ದಾವೆ ಹೂಡುತ್ತೇವೆ’ ಎಂದರು.

‘ಸುರಂಗ ರಸ್ತೆ ಯೋಜನೆಯು ಬೆಂಗಳೂರಿನಲ್ಲಿ ಇನ್ನಷ್ಟು ಪ್ರವಾಹ ಹೆಚ್ಚಿಸಲಿದೆ. ಅಂತರ್ಜಲ ಕುಸಿಯಲು ಕಾರಣವಾಗಲಿದೆ’ ಎಂದು ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಸ್ಥಾಪಕ ರಾಜ್‌ಕುಮಾರ್ ದುಗರ್ ವಿವರಿಸಿದರು.

‘ಜನರ ಜೀವಿಸುವ ಹಕ್ಕು ಸೇರಿದಂತೆ ಹತ್ತು ಕಾನೂನುಗಳನ್ನು ಸರ್ಕಾರ ಉಲ್ಲಂಘಿಸುತ್ತಿದೆ. ಬಫರ್ ವಲಯ ಕಡಿತ ಮಾಡುವುದನ್ನು  ಸಾರ್ವಜನಿಕರು ವಿರೋಧಿಸಬೇಕು’ ಎಂದು ಬೆಂಗಳೂರಿನ ನಾಗರಿಕರ ಕಾರ್ಯಸೂಚಿಯ ಸಂದೀಪ್ ಅನಿರುದ್ಧನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.