ADVERTISEMENT

14 ಸಾವಿರ ಕಲ್ಯಾಣಿ ಸಂರಕ್ಷಣೆಗೆ ‘ಜಲಾಮೃತ’

ಅಂತರ್ಜಲ ಉಳಿವಿಗಾಗಿ ಗ್ರಾಮೀಣಾಭಿವೃದ್ಧಿ , ಪಂಚಾಯತ್ ರಾಜ್ ಇಲಾಖೆಯಿಂದ ಯೋಜನೆ

ಕೆ.ಜೆ.ಮರಿಯಪ್ಪ
Published 2 ಜುಲೈ 2019, 20:30 IST
Last Updated 2 ಜುಲೈ 2019, 20:30 IST
 ಕಲ್ಯಾಣಿ
 ಕಲ್ಯಾಣಿ   

ಬೆಂಗಳೂರು: ಸಣ್ಣ, ಪುಟ್ಟ ಜಲ ಮೂಲಗಳಿಗೆ ಜೀವ ತುಂಬುವ ಮೂಲಕ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಅಂತರ್ಜಲ ಸಂರಕ್ಷಣೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ. ಅದಕ್ಕಾಗಿ ‘ಜಲಾಮೃತ’ ಯೋಜನೆ ರೂಪಿಸಿದೆ.

ಗ್ರಾಮೀಣ ಪ್ರದೇಶದ ಕಲ್ಯಾಣಿಗಳು, ಗೋಕಟ್ಟೆಗಳು ಸೇರಿದಂತೆ ಸುಮಾರು 14 ಸಾವಿರ ಜಲಮೂಲಗಳ ಸಂರ ಕ್ಷಣೆ ಮಾಡಲು ಉದ್ದೇಶಿಸಲಾಗದೆ.ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಅನುದಾನ ಬಳಸಿಕೊಂಡು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

‘ಕರ್ನಾಟಕ ತಂತ್ರಜ್ಞಾನ ಮತ್ತು ತಾಂತ್ರಿಕ ಮಂಡಳಿ’ಯು ಇಂತಹ ಜಲಮೂಲಗಳನ್ನು ಗುರುತಿಸಿದೆ. ದೂರ ಸಂವೇದಿ ಉಪಗ್ರಹದ ಮೂಲಕ ಮಂಡಳಿಯು ಕಲ್ಯಾಣಿ, ಗೋಕಟ್ಟೆಗಳು ಇರುವ ಸ್ಥಳಗಳ ಮಾಹಿತಿ, ಮತ್ತಿತರ ವಿವರಗಳನ್ನುಸಂಗ್ರಹಿಸಿದೆ.ಈ ಮಾಹಿತಿ ಆಧಾರದ ಮೇಲೆಇಲಾಖೆಯು ಕಾರ್ಯ ಯೋಜನೆ ರೂಪಿಸಿದೆ.

ADVERTISEMENT

ಸಾಕಷ್ಟು ಜಲಮೂಲಗಳು ಮರೆಯಾಗಿದ್ದು, ಹೂಳು ತುಂಬಿ, ಗಿಡಗಂಟಿಗಳು ಬೆಳೆದು ಮುಚ್ಚಿ ಹೋಗಿವೆ. ಹಲವೆಡೆ ಇವುಗಳಕುರುಹು ಕೂಡ ಸಿಗದಾಗಿದ್ದು, ಇಂತಹ ಪ್ರದೇಶಗಳನ್ನು ಮಂಡಳಿಯು ಗುರುತಿಸಿದೆ. ರಾಜ್ಯದಲ್ಲಿ ಇರುವ ಕಲ್ಯಾಣಿಗಳ ವಿವರ, ಅವುಗಳ ಹೂಳು ತೆಗೆದು ಸಂರಕ್ಷಿಸುವ ವಿಧಾನದ ಬಗ್ಗೆ ತಾಂತ್ರಿಕ ವರದಿಯನ್ನು ಸಿದ್ಧ ಪಡಿಸಿದೆ.ಈ ವರದಿಯನ್ನೇ ಮೂಲವಾಗಿ ಇಟ್ಟುಕೊಂಡು ಜಲ ಸಂರಕ್ಷಣೆ ಕ್ರಾಂತಿಗೆ ಮುಂದಾಗಿದೆ.

ಆರಂಭಿಕ ಹಂತದಲ್ಲಿ ಹೂಳು ತೆಗೆದು ಸುಸ್ಥಿತಿಗೆ ತರುವುದು. ನಂತರ ಸಣ್ಣಪುಟ್ಟ ದುರಸ್ತಿ ಮಾಡಿಸಿ, ನೀರು ಸಂಗ್ರಹವಾಗುವಂತೆ ನೋಡಿ ಕೊಳ್ಳುವುದು ನಡೆಯಲಿದೆ. ಇದರಿಂದ ಸಾಂಪ್ರದಾಯಿಕ ಜಲ ಮೂಲಗಳಿಗೆ ಮರುಜೀವ ಸಿಗಲಿದ್ದು, ಮುಂದಿನ ದಿನಗಳಲ್ಲಿ ಹಳ್ಳಿ ಜನರು ಸಂರಕ್ಷಣೆ ಮಾಡಲಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಇಲಾಖೆ ಆರಂಭಿಸಿದೆ.

‘ಜಲಾಮೃತ’ ಯೋಜನೆಯಲ್ಲಿ ಗ್ರಾಮೀಣ ಭಾಗದ ಜಲಮೂಲಗಳ ಸಂರಕ್ಷಣೆಯ ಜತೆಗೆ ಅರಣ್ಯ ಪ್ರದೇಶಗಳ ವಿಸ್ತರಣೆಗೂ ಉದ್ದೇಶಿಸಲಾಗಿದೆ. ಕಿರು ಅರಣ್ಯ ಬೆಳೆಸುವುದು, ರಸ್ತೆ ಬದಿ, ಬೀಳು ಭೂಮಿ ಹಾಗೂ ಅಗತ್ಯ ಇರುವೆಡೆ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತದೆ.

ಚೆಕ್‌ ಡ್ಯಾಂ ನಿರ್ಮಾಣ: ಎರಡು ವರ್ಷಗಳ ಅವಧಿಯಲ್ಲಿ 12 ಸಾವಿರ ಚೆಕ್‌ ಡ್ಯಾಮ್‌ಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಈಗಾಗಲೇ 8 ಸಾವಿರ ನಿರ್ಮಾಣ ಹಂತದಲ್ಲಿ ಇವೆ. ಈ ವರ್ಷ 4 ಸಾವಿರ ಚೆಕ್ ಡ್ಯಾಮ್‌ಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಈ ಕೆಲಸ ಪೂರ್ಣಗೊಂಡು, ನೀರು ಸಂಗ್ರಹವಾದರೆ ಅಂತರ್ಜಲದ ಮಟ್ಟ ಹೆಚ್ಚಲುಸಹಕಾರಿಯಾಗಲಿದೆ.

ಈವರೆಗೆಚೆಕ್‌ ಡ್ಯಾಮ್‌ಗಳನ್ನು ವೈಜ್ಞಾನಿಕವಾಗಿ ನಿರ್ಮಿಸುತ್ತಿರಲಿಲ್ಲ. ಎಲ್ಲೆಂದರಲ್ಲಿ, ಅನಗತ್ಯ ಸ್ಥಳಗಳಲ್ಲೂ ಕಟ್ಟಲಾಗುತ್ತಿತ್ತು. ಆದರೆ ಈಗ ಅಧಿಕ ನೀರು ಹರಿದು ಬಂದು ಸಂಗ್ರಹವಾಗಲು ಅನುಕೂಲಕರವಾದ ಪ್ರದೇಶಗಳು, ಭೂಮಿಯಲ್ಲಿ ನೀರು ಇಂಗಲು ಸಹಕಾರಿಯಾಗುವಂತಹ ಸ್ಥಳಗಳನ್ನು ಗುರುತಿಸಿ ಚೆಕ್‌ ಡ್ಯಾಮ್ ನಿರ್ಮಿಸಲಾಗುತ್ತಿದೆ.ಕರ್ನಾಟಕ ತಂತ್ರಜ್ಞಾನ ಮತ್ತು ತಾಂತ್ರಿಕ ಮಂಡಳಿ ನೆರವು ಪಡೆದುಕೊಂಡಿದ್ದು ಇದಕ್ಕೆ ಸಹಕಾರಿಯಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕಲ್ಯಾಣಿಗಳಿಗೆ ಜಿಯೋ ಟ್ಯಾಗ್

ಕಲ್ಯಾಣಿಗಳಿಗೆ ಮರುಜೀವ ನೀಡಿದ ನಂತರ ಜಿಯೋ ಟ್ಯಾಗ್ ಮಾಡಲಾಗುತ್ತದೆ. ಆರಂಭಿಕ ಸ್ಥಿತಿ, ಹೂಳು ತೆಗೆದ ನಂತರ ಆಗುವ ಬದಲಾವಣೆಯ ಚಿತ್ರಗಳು ಮತ್ತಿತರ ವಿವರಗಳನ್ನು ಜಿಯೋ ಟ್ಯಾಗ್‌ ಮಾಡಲಾಗುತ್ತದೆ ಎಂದುಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಇಲಾಖೆ (ನರೇಗಾ) ಆಯುಕ್ತರಾದ ಕನಕವಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಯೋ ಟ್ಯಾಗ್ ಮಾಡುವುದರಿಂದ ಯಾವ ಜಾಗದಲ್ಲಿ ಎಷ್ಟು ಕೆಲಸ ಆಗಿದೆ, ಯಾವ ಪ್ರಮಾಣದಲ್ಲಿ ನಡೆದಿದೆ ಎಂಬ ನಿಖರ ಮಾಹಿತಿ ಲಭ್ಯವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.