ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ‘ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆಬಿತ್ತು. 12 ದಿನ ನಡೆದ ಈ ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು 6.24 ಲಕ್ಷ ಜನ ಭೇಟಿ ನೀಡಿದ್ದು, ಒಟ್ಟು ₹2.78 ಕೋಟಿ ವರಮಾನ ಸಂಗ್ರಹವಾಗಿದೆ.
ಗಾಜಿನ ಮನೆಯ ಆವರಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಜೀವನ ಗಾಥೆಯನ್ನು ಬಣ್ಣ–ಬಣ್ಣದ ಹೂವುಗಳಲ್ಲಿ ಅನಾವರಣಗೊಳಿಸಲಾಗಿತ್ತು. ಆಗಸ್ಟ್ 07ರಿಂದ 18ರವರೆಗೆ ನಡೆದ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ನಿತ್ಯವೂ ಲಕ್ಷಾಂತರ ಜನ ಭಾಗವಹಿಸಿದ್ದರು.
ಪುಷ್ಪಗಳಲ್ಲಿ ಅರಳಿದ ಕಿತ್ತೂರು ಕೋಟೆ, ಚನ್ನಮ್ಮನ ಐಕ್ಯ ಸ್ಮಾರಕ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ಸನ್ನಿವೇಶವನ್ನು ಮರುಸೃಷ್ಟಿಸಲಾಗಿತ್ತು. ಇದನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಬಂದಿದ್ದರು.
‘ಅಂತಿಮ ದಿನವಾದ ಸೋಮವಾರ 27,310 ಜನ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು. ₹3.45 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.