ದೇವನಹಳ್ಳಿಯ ಸುತ್ತಮುತ್ತ ಭೂಸ್ವಾಧೀನ ಮಾಡುವ ಸರ್ಕಾರದ ನಿರ್ಧಾರದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರು ಮತ್ತು ಸಂಯುಕ್ತ ಹೋರಾಟ ಕರ್ನಾಟಕದ ಪ್ರತಿನಿಧಿಗಳು ಪಾಲ್ಗೊಂಡರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಭೂಸ್ವಾಧೀನ ಕೈಬಿಡುವವರೆಗೆ ಹೋರಾಟ ಮುಂದುವರಿಸುವ ತೀರ್ಮಾನಕ್ಕೆ ಬಂದಿರುವ ರೈತ ಸಂಘಟನೆಗಳು, ಜುಲೈ 15ರ ಸಭೆಯವರೆಗೂ ಜಾಗೃತಿ ಅಭಿಯಾನ ನಡೆಸುವತ್ತ ಹೆಜ್ಜೆ ಇಟ್ಟಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಸ್ವಾಧೀನಪಡಿಸಿಕೊಂಡಿರುವ 1,777 ಎಕರೆ ಜಮೀನನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸಾವಿರಕ್ಕೂ ಹೆಚ್ಚು ದಿನಗಳಿಂದ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ರೈತರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಸಂಯುಕ್ತ ಹೋರಾಟ ಕರ್ನಾಟಕ, ಭೂ ಸ್ವಾಧೀನ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಈ ಅವಿಶ್ರಾಂತ ಹೋರಾಟಕ್ಕೆ ಬೆಂಬಲ ಸೂಚಿಸಿದ ಬಳಿಕ, ಸರ್ಕಾರ ಎಚ್ಚೆತ್ತಿತ್ತು.
ಈ ಬೆನ್ನಲ್ಲೇ, ರೈತ ಪ್ರತಿನಿಧಿಗಳ ಸಭೆ ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ, 10 ದಿನ ಸಮಯ ಕೇಳಿದರು. ಬಳಿಕ, ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿದ ರೈತ ಪ್ರತಿನಿಧಿಗಳು ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿದರು.
‘ನಾಡ ಉಳಿಸಿ ಸಮಾವೇಶ’ದಲ್ಲಿ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಹೋರಾಟಗಾರರು, ‘ಜುಲೈ 15ರಂದು ನಡೆಯುವ ಸಭೆಯವರೆಗೆ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ ನಿರಂತರವಾಗಿ ಹೋರಾಟ ಮುಂದುವರಿಸುತ್ತೇವೆ’ ಎಂದಿದ್ದಾರೆ.
‘ಹೋರಾಟಕ್ಕೆ ಕೈಜೋಡಿಸಿರುವ ಎಲ್ಲ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಹಳ್ಳಿ ಹಳ್ಳಿಗೆ ತೆರಳಿ, ರೈತರೊಂದಿಗೆ ಸಭೆ ನಡೆಸಿ, ಪ್ರತಿ ಹಳ್ಳಿಯ ಪ್ರತಿ ರೈತರ ಜಮೀನಿನಲ್ಲಿ ‘ನಮ್ಮ ಭೂಮಿ ನಮ್ಮ ಹಕ್ಕು, ಯಾವ ಕಂಪನಿಗೂ ಬಿಟ್ಟುಕೊಡುವುದಿಲ್ಲ’ ಎಂಬ ಫಲಕವನ್ನು ಅಳವಡಿಸಲು ತೀರ್ಮಾನಿಸಿದ್ದಾರೆ.
ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ರೈತ ಪರ ನಿರ್ಧಾರ ಹೊರಬರದಿದ್ದರೆ ಸಂಯುಕ್ತ ಕಿಸಾನ್ ಮೋರ್ಚಾದ ಬೆಂಬಲದೊಂದಿಗೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿಯೂ ಎಚ್ಚರಿಸಿದ್ದಾರೆ.
‘ಭೂ ಸ್ವಾಧೀನದ ವಿರುದ್ಧದ ಹೋರಾಟ ಹಳ್ಳಿಗಳಿಂದ ಆರಂಭವಾಗಿ ಚನ್ನರಾಯಪಟ್ಟಣ ಹೋಬಳಿ ಕೇಂದ್ರಕ್ಕೆ ಬಂದಿದೆ. ಅಲ್ಲಿಂದ ದೇವನಹಳ್ಳಿ ತಾಲ್ಲೂಕು ಕೇಂದ್ರಕ್ಕೆ, ಈಗ ರಾಜಧಾನಿ ಬೆಂಗಳೂರಿನವರೆಗೂ ಹಬ್ಬಿದ್ದು, ದೇಶದ ಗಮನ ಸೆಳೆದಿದೆ. ಇದೇ 9ರಂದು ರಾಷ್ಟ್ರವ್ಯಾಪಿ ನಡೆಯುವ ಕಾರ್ಮಿಕರ ಮುಷ್ಕರದ ಭಾಗವಾಗಿ, ದೇವನಹಳ್ಳಿಯ ಭೂಮಿ ಹೋರಾಟದ ಹಕ್ಕೊತ್ತಾಯವನ್ನು ಸೇರಿಸುವ ಜೊತೆ, ಎಲ್ಲ ಸಂಘಟನೆಗಳೂ ಸೇರಿ ಈ ಹೋರಾಟವನ್ನು ಯಶಸ್ವಿಗೊಳಿಸುತ್ತೇವೆ’ ಎಂದು ಹೇಳಿದ್ದಾರೆ.
ಪ್ರತಿಭಟನೆ: ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಆರಂಭವಾದ ‘ನಾಡ ಉಳಿಸಿ ಸಮಾವೇಶ’ದಲ್ಲಿ ರಾಜ್ಯದಾದ್ಯಂತ 70ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರಾದ ರಾಕೇಶ್ ಸಿಂಗ್ ಟಿಕಾಯತ್, ದರ್ಶನ್ ಪಾಲ್, ಯುಧ್‌ವೀರ್ ಸಿಂಗ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ‘ಭೂ ಸ್ವಾಧೀನ ವಿರುದ್ಧದ ಹೋರಾಟ’ ಕುರಿತು ಮಾತನಾಡಿದರು.
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಪ್ರತಿನಿಧಿಗಳಾದ ಕಾರಳ್ಳಿ ಶ್ರೀನಿವಾಸ್, ನಂಜಪ್ಪ ನಲ್ಲಪ್ಪನಹಳ್ಳಿ, ಮಾರೇಗೌಡ, ಗೋಪಿನಾಥ್, ರಮೇಶ್ ಚೀಮಾಚನಹಳ್ಳಿ, ಅಶ್ವಥ್ಥಪ್ಪ, ಪ್ರಭಾ ಬೆಳವಂಗಲ, ರಘು, ಸಂಯುಕ್ತ ಹೋರಾಟ ಕರ್ನಾಟಕದ ಪ್ರತಿನಿಧಿಗಳಾದ ಬಡಗಲಪುರ ನಾಗೇಂದ್ರ, ಎಸ್ ವರಲಕ್ಷ್ಮೀ, ನೂರ್ ಶ್ರೀಧರ್, ಎಚ್.ಆರ್.ಬಸವರಾಜಪ್ಪ, ಎಸ್ ಮೀನಾಕ್ಷಿ ಸುಂದರಂ, ಸಿದ್ದನಗೌಡ ಪಾಟೀಲ, ಗುರುಪ್ರಸಾದ್ ಕೆರಗೋಡು, ಯು.ಬಸವರಾಜ, ಚುಕ್ಕಿ ನಂಜುಂಡಸ್ವಾಮಿ, ವಿ ನಾಗರಾಜ್, ಪಿ.ಪಿ. ಅಪ್ಪಣ್ಣ, ಡಿ.ಎಚ್.ಪೂಜಾರ್, ಕೆ.ವಿ.ಭಟ್, ಮಾವಳ್ಳಿ ಶಂಕರ್, ಡಾ.ಸುನೀಲಮ್, ವಿಜು ಕೃಷ್ಣನ್, ಪಿ,ಟಿ.ಜಾನ್, ನಟ ಪ್ರಕಾಶ್ ರಾಜ್, ಪತ್ರಕರ್ತ ಇಂದೂಧರ ಹೊನ್ನಾಪುರ, ಚಿಂತಕ ಎಸ್.ಆರ್.ಹಿರೇಮಠ ಸಮಾವೇಶದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.