ADVERTISEMENT

ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶೆ ಲತಾ ಕುಮಾರಿ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 19:18 IST
Last Updated 23 ಅಕ್ಟೋಬರ್ 2018, 19:18 IST
ADVOCATE
ADVOCATE   

ಬೆಂಗಳೂರು:‌ ದುರ್ವರ್ತನೆ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಎಂ.ಲತಾ ಕುಮಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಟಿ ಸಿವಿಲ್‌ ಕೋರ್ಟ್‌ ವಕೀಲರು ಒತ್ತಾಯಿಸಿದ್ದಾರೆ.

ಈ ಸಂಬಂಧ ಹಿರಿಯ ವಕೀಲ ಎಸ್‌.ಬಾಲನ್‌ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಯುವ ವಕೀಲರು ಬೆಂಗಳೂರು ನಗರ ಜಿಲ್ಲೆಯ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ಅವರನ್ನು ಮಂಗಳವಾರ ಖುದ್ದು ಭೇಟಿ ಮಾಡಿ ಲತಾಕುಮಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಲಿಖಿತ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಅಮರಣ್ಣವರ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ADVERTISEMENT

ಆರೋಪಗಳೇನು?:

* ಲತಾ ಕುಮಾರಿ ಕಲಾಪದ ವೇಳೆ ವಕೀಲರು, ಆರೋಪಿಗಳು ಮತ್ತು ಸಾಕ್ಷಿಗಳ ವಿರುದ್ಧ ಅತೀರೇಕದ ವರ್ತನೆ ಪ್ರದರ್ಶಿಸುತ್ತಾರೆ.

* ಎಲ್ಲರನ್ನೂ ಏಕವಚನದಲ್ಲಿ ನಿಂದಿಸುತ್ತಾರೆ. ವಕೀಲರಿಗೆ ಗೆಟ್‌ ಔಟ್‌ ಎನ್ನುತ್ತಾರೆ.

* ಅವರ ವರ್ತನೆಗೆ ಆಕ್ಷೇಪಿಸಿದರೆ, ಪರಿಷತ್‌ಗೆ ನಿಮ್ಮ ವಿರುದ್ಧ ದೂರು ನೀಡುತ್ತೇನೆ. ನಿಮ್ಮ ಬ್ಯಾಂಡ್‌ ತೆಗೆಸಿಬಿಡುತ್ತೇನೆ, ನ್ಯಾಯಾಂಗ ನಿಂದನೆ ಕೇಸು ಎದುರಿಸುವಂತೆ ಮಾಡುತ್ತೇನೆ ಎಂದೆಲ್ಲಾ ಹೆದರಿಸುತ್ತಾರೆ.

* ಇವರ ಕೋರ್ಟ್‌ ಹಾಲ್‌ನಲ್ಲಿ ಇತ್ತೀಚೆಗಷ್ಟೇ ವಿನೋದ್ ಕುಮಾರ್ ಎಂಬ 22 ವರ್ಷದ ಯುವಕ ಬ್ಲೇಡ್‌ನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇದಕ್ಕೆ ಈ ನ್ಯಾಯಾಧೀಶೆಯ ದುರ್ವರ್ತನೆಯೇ ಕಾರಣ.

* ಸಾಕ್ಷಿ ನುಡಿಯಲು ಬಂದವರನ್ನು ನೀನಷ್ಟೇ ಅಲ್ಲ ನಿಮ್ಮ ಕುಟುಂಬದವರನ್ನೆಲ್ಲಾ ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಕೆ ಒಡ್ಡುತ್ತಾರೆ.

* ಆರೋಪಿಗಳು ಹೈಕೋರ್ಟ್‌ನಿಂದ ಜಾಮೀನು ಪಡೆದು ಬಂದರೆ ಭದ್ರತಾ ಬಾಂಡ್‌ಗಳನ್ನು ತಿರಸ್ಕರಿಸುತ್ತಾರೆ.

* ಆರೋಪಿಗಳಿಗೆ ಸುಖಾ ಸುಮ್ಮನೆ ಕಠಿಣ ಶಿಕ್ಷೆ ವಿಧಿಸುತ್ತಾರೆ. ಪ್ರಶ್ನಿಸಿದರೆ, ಬೇಕಿದ್ದರೆ ಮೇಲ್ಮನವಿ ಸಲ್ಲಿಸಿಕೊಳ್ಳಿ ಎಂಬ ಉಡಾಫೆ ಉತ್ತರ ನೀಡುವ ಮೂಲಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳ ಆದೇಶಗಳಿಗೆ ಅಗೌರವ ತೋರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.