ADVERTISEMENT

ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ: ವಕೀಲರು ಪೊಲೀಸರ ವಶಕ್ಕೆ

ವಿಧಾನಸೌಧ ಮುತ್ತಿಗೆಗೆ ಯತ್ನ: ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 4:55 IST
Last Updated 14 ಫೆಬ್ರುವರಿ 2023, 4:55 IST
ಕೆ.ಆರ್. ವೃತ್ತ ಬಳಿ ತಮ್ಮನ್ನು ತಡೆದ ಪೊಲೀಸರನ್ನು ಮಹಿಳಾ ವಕೀಲರು ತರಾಟೆಗೆ ತೆಗೆದುಕೊಂಡರು – ಪ್ರಜಾವಾಣಿ ಚಿತ್ರ
ಕೆ.ಆರ್. ವೃತ್ತ ಬಳಿ ತಮ್ಮನ್ನು ತಡೆದ ಪೊಲೀಸರನ್ನು ಮಹಿಳಾ ವಕೀಲರು ತರಾಟೆಗೆ ತೆಗೆದುಕೊಂಡರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ವಕೀಲರು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಮುತ್ತಿಗೆ ಯತ್ನ ವಿಫಲಗೊಳಿಸಿದ ಪೊಲೀಸರು, ಕೆ.ಆರ್‌. ವೃತ್ತದಲ್ಲಿ 50ಕ್ಕೂ ಹೆಚ್ಚು ವಕೀಲರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ಬಸ್‌ಗಳಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆದೊಯ್ದರು. ಕೆಲ ಗಂಟೆಗಳ ಬಳಿಕ ಎಲ್ಲರನ್ನೂ ಬಿಡುಗಡೆಗೊಳಿಸಿದರು.

ರಾಜ್ಯ ವಕೀಲರ ಸಂಘ ಹಾಗೂ ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಬೆಳಿಗ್ಗೆ ಸೇರಿದ್ದ ವಕೀಲರು, ಕಾಯ್ದೆ ಜಾರಿಗಾಗಿ ಘೋಷಣೆ ಕೂಗಿದರು. ಪ್ರತಿಭಟನೆ ಮಾಹಿತಿ ತಿಳಿದು ವಕೀಲರ ಮುಖಂಡರ ಜೊತೆ ಮಾತುಕತೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಮಧ್ಯಾಹ್ನ ಸಭೆ ನಡೆಸಿ ಕಾಯ್ದೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು. ಹೀಗಾಗಿ, ವಕೀಲರು ಶಾಂತಿಯುತ ಪ್ರತಿಭಟನೆ ಮುಂದುವರಿಸಿದ್ದರು.

‘ಕಾಯ್ದೆ ಜಾರಿ ಸಂಬಂಧ ಮುಖ್ಯಮಂತ್ರಿ ಯಾವುದೇ ಸಭೆ ನಡೆಸಿಲ್ಲ’ ಎಂಬುದು ಮಧ್ಯಾಹ್ನ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ವಕೀಲರು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದರು. ನ್ಯಾಯಾಲಯದಿಂದ ಹೊರಬಂದು ಕೆ.ಆರ್. ವೃತ್ತದ ಮೂಲಕ ವಿಧಾನಸೌಧದತ್ತ ಮೆರವಣಿಗೆ ಮೂಲಕ ಹೊರಟರು.

‘ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದೆ. ಪ್ರತಿಭಟನೆಗೆ ಅವಕಾಶವಿಲ್ಲ’ ಎಂದು ಪೊಲೀಸರು ಹೇಳಿದರು. ಅದಕ್ಕೆ ಕಳೆದುಕೊಂಡ ವಕೀಲರು, ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನಗಲು ಮುಂದಾದರು. ವಕೀಲರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನೂಕಾಟ–ತಳ್ಳಾಟವೂ ಉಂಟಾಯಿತು.

ವಿಪರೀತ ದಟ್ಟಣೆ: ವಕೀಲರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರಿಂದ ಕೆ.ಆರ್.ವೃತ್ತ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಯಿತು. ಕೆಂಪೇಗೌಡ ರಸ್ತೆ, ಕಾರ್ಪೋರೇಷನ್ ವೃತ್ತ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆಗಳಲ್ಲಿ ವಾಹನಗಳು ಗಂಟೆಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಬಸ್‌ಗಳಿಂದ ಇಳಿದ ಪ್ರಯಾಣಿಕರು, ನಡೆದುಕೊಂಡು ಮುಂದಕ್ಕೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.