ADVERTISEMENT

ಕೆನೆಪದರ ಬಿಡಿ, ಒಳಮೀಸಲಾತಿ ತಕ್ಷಣ ಜಾರಿ ಮಾಡಿ: ಹಕ್ಕೊತ್ತಾಯ ಮಂಡನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 15:44 IST
Last Updated 17 ಆಗಸ್ಟ್ 2024, 15:44 IST
ಬೆಂಗಳೂರಿನ ಶಾಸಕರ ಭವನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ರವಿವರ್ಮ ಕುಮಾರ್  ಮಾತನಾಡಿದರು. ಮುಖಂಡರಾದ ಎನ್. ವೆಂಕಟೇಶ್, ಬಸವರಾಜ್ ಕೌತಾಳ್, ಮಾವಳ್ಳಿ ಶಂಕರ್ ಪಾಲ್ಗೊಂಡಿದ್ದರು - ಪ್ರಜಾವಾಣಿ ಚಿತ್ರ
ಬೆಂಗಳೂರಿನ ಶಾಸಕರ ಭವನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ರವಿವರ್ಮ ಕುಮಾರ್  ಮಾತನಾಡಿದರು. ಮುಖಂಡರಾದ ಎನ್. ವೆಂಕಟೇಶ್, ಬಸವರಾಜ್ ಕೌತಾಳ್, ಮಾವಳ್ಳಿ ಶಂಕರ್ ಪಾಲ್ಗೊಂಡಿದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೆನೆಪದರ ಬಗ್ಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ವ್ಯಕ್ತಿಗತವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಯೇ ಹೊರತು ಯಾವುದೇ ತೀರ್ಪು ನೀಡಿಲ್ಲ. ಒಳ ಮೀಸಲಾತಿ ಬಗ್ಗೆ ಮಾತ್ರ ತೀರ್ಪು ನೀಡಿದ್ದಾರೆ. ರಾಜ್ಯ ಸರ್ಕಾರವು ಕೆನೆಪದರ ವಿಚಾರವನ್ನು ಬದಿಗಿಟ್ಟು ಒಳಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು ಎಂಬ ಹಕ್ಕೊತ್ತಾಯವನ್ನು ಇಲ್ಲಿ ನಡೆದ ದುಂಡು ಮೇಜಿನ ಸಭೆ ಮಂಡಿಸಿದೆ.

ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ಶನಿವಾರ ಹಮ್ಮಿಕೊಂಡಿದ್ದ ‘ಒಳಮೀಸಲಾತಿಗಾಗಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಕುರಿತು ಅಭಿಪ್ರಾಯ ಮತ್ತು ಅನುಷ್ಠಾನಕ್ಕೊತ್ತಾಯ’ ಕುರಿತ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಏಕಮತದ ಒತ್ತಾಯವನ್ನು ಮಂಡಿಸಿದರು.

ರಾಜ್ಯದಲ್ಲಿ ವೈಜ್ಞಾನಿಕ ದತ್ತಾಂಶಗಳ ಆಧಾರದಲ್ಲಿ ರಚಿತವಾಗಿರುವ ನ್ಯಾ. ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಒಳಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಲಾಯಿತು. 

ADVERTISEMENT

ಒಳ ಮೀಸಲಾತಿಯು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಕ್ಕೆ ಮಾತ್ರ ಸಂಬಂಧಪಟ್ಟಿದೆ. ಶಾಲೆಗಳಿಗೆ ಪ್ರವೇಶ ಪಡೆಯುವಾಗಲೇ ಜಾತಿ ದಾಖಲಾಗಿರುತ್ತದೆ. ಹಾಗಾಗಿ ಶಾಲಾ–ಕಾಲೇಜುಗಳಲ್ಲಿ ಎಷ್ಟು ಪರಿಶಿಷ್ಟ ಜಾತಿಯ ಎಷ್ಟು ವಿದ್ಯಾರ್ಥಿಗಳಿದ್ದಾರೆ ಎಂದು ಮಾಹಿತಿ ಸಂಗ್ರಹಿಸುವುದು ಕಷ್ಟದ ಕೆಲಸವಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಿಗಳಾಗಿ ಎಷ್ಟು ಮಂದಿ ಇದ್ದಾರೆ. ಸಾರ್ವಜನಿಕ ಉದ್ದಿಮೆಗಳಲ್ಲಿ ಎಷ್ಟು ಜನರು ಉದ್ಯೋಗ ಪಡೆದಿದ್ದಾರೆ ಎಂಬ ಮಾಹಿತಿ ಪಡೆಯಬೇಕು. ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕಿದೆಯೇ ಎಂಬ ಮಾಹಿತಿಯನ್ನೂ ಸಂಗ್ರಹಿಸಬೇಕು ಎಂಬ ಸಲಹೆಗಳು ಬಂದವು.

ನ್ಯಾ. ಸದಾಶಿವ ಆಯೋಗವು ಪರಿಶಿಷ್ಟ ಜಾತಿಯಲ್ಲಿರುವ ಎಡಗೈ, ಬಲಗೈ, ಸ್ಪರ್ಶರು ಮತ್ತು ಇತರರು (ಅಲೆಮಾರಿಗಳು) ಎಂದು ನಾಲ್ಕು ವಿಭಾಗ ಮಾಡಿದೆ. ಅದೇ ರೀತಿ ನ್ಯಾ.ನಾಗಮೋಹನದಾಸ್‌ ಆಯೋಗವು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ವರದಿ ನೀಡಿತ್ತು. ಇದೆಲ್ಲವನ್ನು ಪರಿಗಣಿಸಿಕೊಂಡು ಒಳಮೀಸಲಾತಿಯನ್ನು ವಿಳಂಬ ಮಾಡದೇ ಜಾರಿಗೊಳಿಸಬೇಕು ಎಂದು ಎಲ್ಲ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ಅವರು ಪೀಠದ ಇತರ ನ್ಯಾಯಮೂರ್ತಿಗಳಿಗೆ ಅಭಿಪ್ರಾಯ ವ್ಯಕ್ತಪಡಿಸಲು ನೀಡಿದ ನಾಲ್ಕು ಪ್ರಶ್ನೆಗಳಲ್ಲಿ ಕೆನೆಪದರ ವಿಚಾರ ಇರಲೇ ಇಲ್ಲ. ಆನಂತರ ಇತರ ನ್ಯಾಯಮೂರ್ತಿಗಳು ಇದರ ಬಗ್ಗೆ ವೈಯಕ್ತಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದಾಗಲೂ ನ್ಯಾ.ಚಂದ್ರಚೂಡ್‌ ಅವರು ಕೆನೆಪದರ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿದ್ದಾರೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮೇಲ್‌ಚಲನೆ ಉಂಟಾಗಿದ್ದರೆ ಮಾತ್ರ ಕೆನೆಪದರ ಜಾರಿಗೆ ತರಬಹುದು. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮೇಲ್‌ಚಲನೆ ಉಂಟಾದರೂ ಜಾತಿ ವ್ಯವಸ್ಥೆಯಿರುವ ಈ ದೇಶದಲ್ಲಿ ಸಾಮಾಜಿಕ ಮೇಲ್‌ಚಲನೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಕೆನೆಪದರ ವಿಚಾರ ಇಟ್ಟುಕೊಂಡು ಜಗ್ಗಾಡುವ ಬದಲು ಒಳಮೀಸಲಾತಿ ಜಾರಿ ಮಾಡಿ ಸಮುದಾಯಗಳಿಗೆ ನ್ಯಾಯ ನೀಡಬೇಕು ಎಂದು ಪ್ರಮುಖರು ಆಗ್ರಹಿಸಿದರು.

ವಿವಿಧ ರಂಗಗಳ ಚಿಂತಕರಾದ ರವಿವರ್ಮ ಕುಮಾರ್‌, ಎನ್. ವೆಂಕಟೇಶ್‌, ಬಸವರಾಜ್ ಕೌತಾಳ್, ಮಾವಳ್ಳಿ ಶಂಕರ್‌, ಎನ್‌. ಮುನಿಸ್ವಾಮಿ, ಶಿವಸುಂದರ್‌, ಗುರುರಾಜ್‌ ಬೇಡಿಕರ್‌, ವೀರಸಂಗಯ್ಯ, ಸಿರಿಗೌರಿ, ಅಂಬಣ್ಣ ಅರೋಲಿಕರ್‌ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.