ADVERTISEMENT

ಒಳಮೀಸಲಾತಿಗೆ ಎಡಗೈ ಸಮುದಾಯ ಸಂಭ್ರಮ: ವಿಧಾನಸೌಧದ ಸುತ್ತ ಬಿಗಿ ಭದ್ರತೆ

ಸ್ವಾತಂತ್ರ್ಯ ಉದ್ಯಾನದಲ್ಲಿ ಎಡಗೈ ಸಮುದಾಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 20:07 IST
Last Updated 19 ಆಗಸ್ಟ್ 2025, 20:07 IST
<div class="paragraphs"><p>ವಿಧಾನಸೌಧ (ಸಾಂದರ್ಭಿಕ ಚಿತ್ರ)</p></div>

ವಿಧಾನಸೌಧ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಸಂಬಂಧ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿ ಅಂಗೀಕರಿಸುವ ಕುರಿತು ಮಂಗಳವಾರ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿದ್ದ ವೇಳೆ ವಿಧಾನಸೌಧದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ವಿಧಾನ ಮಂಡಲದ ದಿನದ ಕಲಾಪ ಮುಗಿಯುತ್ತಿದ್ದಂತೆ ರಾತ್ರಿ 7ರ ಬಳಿಕ ವಿಧಾನಸೌಧಕ್ಕೆ ಸಾರ್ವಜನಿಕರು ಹಾಗೂ ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೂ ಕೆಲವು ಸಂಘಟನೆಗಳ ಮುಖಂಡರು ರಾಜಕೀಯ ನಾಯಕರ ಹೆಸರು ಹೇಳಿ, ವಿಧಾನಸೌಧ ಪ್ರವೇಶಿಸಿದರು. ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಕಾದಿದ್ದರು. 

ADVERTISEMENT

ಸಭೆಯ ತೀರ್ಮಾನ ಪ್ರಕಟಿಸುತ್ತಿದ್ದಂತೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಡಗೈ ಸಮುದಾಯದವರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸರ್ಕಾರದ ಪರ ಜಯಘೋಷ ಮೊಳಗಿದವು.

ವರದಿ ಶಿಫಾರಸುಗಳ ಜಾರಿ ಕುರಿತು ಒಂದು ತಿಂಗಳಿನಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಲವು ಸಂಘಟನೆಗಳು ಪರ–ವಿರೋಧ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

ವರದಿಯ ಪರವಾಗಿದ್ದ ಸಂಘಟನೆಗಳು ತಕ್ಷಣ ವರದಿಯನ್ನು ಅಂಗೀಕರಿಸಿ, ಶಿಫಾರಸುಗಳನ್ನು ಜಾರಿ ಮಾಡಬೇಕೆಂದು ಪಟ್ಟು ಹಿಡಿದಿದ್ದವು. ಮತ್ತೊಂದೆಡೆ ವರದಿಗೆ ವಿರೋಧ ವ್ಯಕ್ತಪಡಿಸಿದ್ದ ಸಂಘಟನೆಗಳು, ವರದಿಯಲ್ಲಿ ಹಲವು ಲೋಪದೋಷಗಳಿದ್ದು, ಪರಿಷ್ಕರಿಸಿ ಇಲ್ಲವೇ ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದವು.

ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮಂಗಳವಾರ ವ್ಯಕ್ತಿಯೊಬ್ಬ ಪೆಟ್ರೋಲ್ ಹಿಡಿದು ಬೆಂಕಿ ಹಚ್ಚಿಕೊಳ್ಳಲು ಮುಂದಾದಾಗ ಸ್ಥಳದಲ್ಲಿದ್ದ ಪೊಲೀಸರು ತಡೆದು, ಕರೆದೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.