ADVERTISEMENT

ನಿಂಬೆ ಹಣ್ಣು ವ್ಯಾಪಾರಿಯ ಕೊಲೆ

ಕೆ.ಆರ್.ಮಾರುಕಟ್ಟೆಯಲ್ಲೇ ನಡೆದ ಹತ್ಯೆ * ಮಾರ್ಕೆಟ್ ವೇಲು ಭಾಮೈದನಿಗೆ ಶೋಧ

​ಪ್ರಜಾವಾಣಿ ವಾರ್ತೆ
Published 15 ಮೇ 2019, 19:38 IST
Last Updated 15 ಮೇ 2019, 19:38 IST
ಭರತ್
ಭರತ್   

ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆಯ ನಿಂಬೆಹಣ್ಣು ವ್ಯಾಪಾರಿ ಭರತ್‌ನನ್ನು (31)ಆತನ ಸ್ನೇಹಿತರೇ ಮಚ್ಚು–ಲಾಂಗುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಕೆ.ಆರ್.ಮಾರುಕಟ್ಟೆಯಲ್ಲಿ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಹತ್ಯೆ ನಡೆದಿದ್ದು, ಸಿಟಿ ಮಾರ್ಕೆಟ್ ಪೊಲೀಸರು ಹಣ್ಣಿನ ವ್ಯಾಪಾರಿ ಶರವಣ ಅಲಿಯಾಸ್ ಕೇರಿ ಹಾಗೂ ಆತನ ಸೋದರ ವೆಂಕಟೇಶ್ ಬಂಧನಕ್ಕೆ ‌ಬಲೆ ಬೀಸಿದ್ದಾರೆ.

ಮಾರ್ಕೆಟ್ ವೇಲು ಭಾಮೈದ: ಹಳೆ ಗುಡ್ಡದಹಳ್ಳಿ ಸಮೀಪದ ಜನತಾ ಕಾಲೊನಿ ನಿವಾಸಿಯಾದ ಭರತ್, 8 ವರ್ಷಗಳಿಂದ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಮಾರುತ್ತಿದ್ದ. ಇತ್ತೀಚೆಗೆ ಆತನ ಚಿಕ್ಕಮ್ಮ ಮಾರ್ಕೆಟ್‌ನ ಪೂರ್ವ ಗೇಟ್ ಬಳಿ ಹೂವಿನ ಅಂಗಡಿ ಹಾಕಿಕೊಳ್ಳಲು ಮುಂದಾಗಿದ್ದರು. ಅದಕ್ಕೆ ಕುಖ್ಯಾತ ರೌಡಿ ವೇಲು ಅಲಿಯಾಸ್ ಮಾರ್ಕೆಟ್ ವೇಲು ಅಡ್ಡಿಪಡಿಸಿದ್ದ. ಈ ವಿಚಾರಕ್ಕೆ ಮನಸ್ತಾಪ ಶುರುವಾದಾಗ ವೇಲು ಭಾಮೈದ (ಸೋದರಿಯ ಗಂಡ) ಶರವಣನೇ ಭರತ್‌ನ ಬೆನ್ನಿಗೆ ನಿಂತಿದ್ದ.

ADVERTISEMENT

ಇತ್ತೀಚೆಗೆ ಭರತ್‌ನ ಸ್ನೇಹ ತೊರೆದ ಶರವಣ, ತನ್ನ ಭಾವ ವೇಲು ಗ್ಯಾಂಗನ್ನೇ ಸೇರಿಕೊಂಡಿದ್ದ. ಇದರಿಂದ ಕುಪಿತಗೊಂಡ ಭರತ್, ಇದೇ ಏಪ್ರಿಲ್‌ನಲ್ಲಿ ಗೋರಿಪಾಳ್ಯದಲ್ಲಿ ಆತನ ಮೇಲೆ ಹಲ್ಲೆ ನಡೆಸಿದ್ದ. ಈ ಪ್ರಕರಣದಲ್ಲಿ ಜಗಜೀವನ್‌ರಾಮನಗರ ಪೊಲೀಸರು ಭರತ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

‘ಮೂರು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ಶರವಣ, ಸೋದರ ಹಾಗೂ ಸಹಚರರೊಂದಿಗೆ ಸೇರಿ ಮಂಗಳವಾರ ರಾತ್ರಿ ಕೊಲೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ವೇಲು ಕೈವಾಡವಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ಐದು ಮಂದಿಯಿಂದ ಹತ್ಯೆ

ಶರವಣ, ವೆಂಕಟೇಶ್ ಮಾತ್ರವಲ್ಲದೇ ಇನ್ನೂ ಮೂವರೂ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಸಿ.ಸಿ ಟಿ.ವಿ ಕ್ಯಾಮೆರಾದಿಂದ ಗೊತ್ತಾಗಿದೆ.

‘ರಾತ್ರಿ 8.30ರ ಸುಮಾರಿಗೆ ಪೂರ್ವ ಗೇಟ್ ಬಳಿ ಈ ದಾಳಿ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಭರತ್‌ನನ್ನು ಆತನ ತಮ್ಮ ಅಪ್ಪು ಆಸ್ಪತ್ರೆಗೆ ಕರೆದೊಯ್ದಿದ್ದ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ 10.30ರ ಸುಮಾರಿಗೆ ಆತ ಕೊನೆಯುಸಿರೆಳೆದ. ಹಂತಕರ ಬಂಧನಕ್ಕೆ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.