ADVERTISEMENT

ಕಳಚಿದ ಲಿಫ್ಟ್‌: ವಿದ್ಯಾರ್ಥಿನಿಯರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 18:59 IST
Last Updated 12 ನವೆಂಬರ್ 2018, 18:59 IST

ಬೆಂಗಳೂರು: ಪುಲಿಕೇಶಿನಗರ ಬಳಿಯ ‘ಸಿಲ್ವರ್ ನೆಸ್ಟ್’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಲಿಫ್ಟ್‌ ಭಾನುವಾರ ರಾತ್ರಿ ದಿಢೀರ್ ಕಳಚಿ ಬಿದ್ದಿದ್ದರಿಂದ ಲಿಫ್ಟ್‌ನಲ್ಲಿದ್ದ ಮೂವರು ಎಲ್‌ಎಲ್‌ಬಿ ವಿದ್ಯಾರ್ಥಿನಿಯರು ತೀವ್ರವಾಗಿ ಗಾಯಗೊಂಡಿದ್ದಾರೆ.

ಹೈದರಾಬಾದ್‌ ನಿವಾಸಿಗಳಾದ ಅಕ್ಷರಾ ರೆಡ್ಡಿ (20), ತನುಶ್ರೀ(21) ಹಾಗೂ ಫಲಕ್‌ ರೆಡ್ಡಿ (20) ಗಾಯಗೊಂಡಿದ್ದು, ಹಾಸ್‌ಮ್ಯಾಟ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕೈ ಹಾಗೂ ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

‘ಹೈದರಾಬಾದ್‌ನ ಕಾಲೇಜೊಂದರಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿರುವ ಮೂವರೂ, ಇಂಟರ್ನ್‌ಷಿಪ್‌ ಮಾಡಲೆಂದು ಮೂರು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಅಪಾರ್ಟ್‌ಮೆಂಟ್‌ ಸಮುಚ್ಚಯದ ಮೂರನೇ ಮಹಡಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಉಳಿದುಕೊಂಡಿದ್ದರು’ ಎಂದರು.

ADVERTISEMENT

‘ಭಾನುವಾರ ರಜೆ ಇದ್ದಿದ್ದರಿಂದ ಮೂವರೂ, ನಗರ ಸುತ್ತಾಡಲೆಂದು ಮಧ್ಯಾಹ್ನ ಹೊರಗೆ ಹೋಗಿ, ರಾತ್ರಿ ವಾಪಸ್‌ ಬಂದಿದ್ದರು. ತಮ್ಮ ಫ್ಲ್ಯಾಟ್‌ಗೆ ಹೋಗಲೆಂದು ಲಿಫ್ಟ್‌ ಹತ್ತಿದ್ದರು. ಮೂರನೇ ಮಹಡಿಗೆ ಹೋಗಿ ನಿಂತಿದ್ದ ಲಿಫ್ಟ್‌, ಬಾಗಿಲು ತೆರೆಯುವ ಮುನ್ನವೇ ದಿಢೀರ್‌ ಕಳಚಿ ಬಿದ್ದಿತ್ತು. ಆ ಘಟನೆ ಬಗ್ಗೆ ಗಾಯಾಳುಗಳು ಹೇಳಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

‘ಲಿಫ್ಟ್‌ನೊಳಗೆ ನರಳುತ್ತಿದ್ದ ವಿದ್ಯಾರ್ಥಿನಿಯರು, ಸಹಾಯಕ್ಕಾಗಿ ಕೂಗಾಡಿದ್ದರು. ಅದನ್ನು ಕೇಳಿಸಿಕೊಂಡು ಸಹಾಯಕ್ಕೆ ಬಂದ ಸ್ಥಳೀಯ ನಿವಾಸಿಗಳು, ಮೂವರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆ ವೈದ್ಯರಿಂದಲೇ ನಮಗೆ ವಿಷಯ ಗೊತ್ತಾಯಿತು. ನಂತರ, ಆಸ್ಪತ್ರೆಗೆ ಹೋಗಿ ಗಾಯಾಳುಗಳ ಹೇಳಿಕೆ ಪಡೆಯಲಾಗಿದೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.