ADVERTISEMENT

ಸಾಹಿತ್ಯದಿಂದ ಬೆಂಕಿಯಲ್ಲ, ಬೆಳಕು ಬರಬೇಕು- ನ್ಯಾ. ಎಚ್‌.ಎನ್‌. ನಾಗಮೋಹನದಾಸ್‌

‘ಕನ್ನಡ ಎನೆ‘ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನ್ಯಾ. ಎಚ್‌.ಎನ್‌. ನಾಗಮೋಹನದಾಸ್‌

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 16:05 IST
Last Updated 19 ಆಗಸ್ಟ್ 2023, 16:05 IST
‘ಕನ್ನಡ ಎನೆ’ ಪುಸ್ತಕವನ್ನು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಬಿಡುಗಡೆ ಮಾಡಿ ಕೃತಿಕಾರ ಕಾ.ತ. ಚಿಕ್ಕಣ್ಣ ಅವರಿಗೆ ಹಸ್ತಾಂತರಿಸಿದರು. –ಪ್ರಜಾವಾಣಿ ಚಿತ್ರ/
‘ಕನ್ನಡ ಎನೆ’ ಪುಸ್ತಕವನ್ನು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಬಿಡುಗಡೆ ಮಾಡಿ ಕೃತಿಕಾರ ಕಾ.ತ. ಚಿಕ್ಕಣ್ಣ ಅವರಿಗೆ ಹಸ್ತಾಂತರಿಸಿದರು. –ಪ್ರಜಾವಾಣಿ ಚಿತ್ರ/   

ಬೆಂಗಳೂರು: ನೋಡಿದ, ಕೇಳಿದ, ಓದಿದ, ಅನುಭವಿಸಿದ ವಿಷಯಗಳೇ ಕಥೆ, ಕವನ, ಕಾದಂಬರಿ ಎಂಬ ಬೇರೆ ಬೇರೆ ಪ್ರಕಾರಗಳಾಗಿ ಅಭಿವ್ಯಕ್ತಿಗೊಳ್ಳುತ್ತವೆ. ಇಂಥ ಕ್ರಿಯಾಶೀಲತೆಯಿಂದ ಬೆಂಕಿಯೂ ಬರಬಹುದು, ಬೆಳಕೂ ಬರಬಹುದು. ಬೆಂಕಿ ಹಚ್ಚುವ ಸಾಹಿತ್ಯಕ್ಕಿಂತ ಬೆಳಕು ತೋರುವ ಸಾಹಿತ್ಯದ ಅಗತ್ಯವಿದೆ ಎಂದು ಸಂಸ್ಕೃತಿ ಚಿಂತಕ ನ್ಯಾ. ಎಚ್‌.ಎನ್‌. ನಾಗಮೋಹನದಾಸ್ ಹೇಳಿದರು.

ಸಿರಿವರ ಪ್ರಕಾಶನ ಪ್ರಕಟಿಸಿದ ಕಾ.ತ. ಚಿಕ್ಕಣ್ಣ ಅವರ ‘ಕನ್ನಡ ಎನೆ’ ಕೃತಿಯನ್ನು ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ತಮ್ಮದಲ್ಲದ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ, ಇದ್ದ ಕೆಲಸವನ್ನು ಕಳೆದುಕೊಂಡು ಬೀದಿಪಾಲಾಗುತ್ತಿರುವವರಿಗೆ, ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವವರಿಗೆ, ದಾರಿ ಕಾಣದೇ ಸಂಕಷ್ಟದಲ್ಲಿ ಇರುವ ಯುವಜನರಿಗೆ ಮಾರ್ಗದರ್ಶನ ಮಾಡುವ ಪುಸ್ತಕಗಳು ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ADVERTISEMENT

ತಂದೆ ತಾಯಿಯ ಆಸ್ತಿಗಾಗಿ ಜಗಳವಾಡಿ ನ್ಯಾಯಾಲಯಕ್ಕೆ ಬರುವವರನ್ನು ನೋಡಿದ್ದೇನೆ. ತಂದೆ ತಾಯಿ ಬಿಟ್ಟು ಹೋದ ಪುಸ್ತಕಗಳಿಗಾಗಿ ಜಗಳವಾಡಿ ನ್ಯಾಯ ಕೇಳಲು ಇಲ್ಲಿವರೆಗೆ ಯಾರೂ ಬಂದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಿ.ಟಿ. ಲಲಿತಾ ನಾಯಕ್‌ ಮಾತನಾಡಿ, ‘ಕಾಲ್ಪನಿಕ ಸಾಹಿತ್ಯಕ್ಕಿಂತ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ, ಬೆಳಕು ಚೆಲ್ಲುವ ಸಾಹಿತ್ಯ ಬರಬೇಕು. ಅಸ್ಪೃಶ್ಯತೆ, ಲಿಂಗ ತಾರತಮ್ಯ, ಜಾತಿ ತಾರತಮ್ಯ, ಕಪ್ಪು–ಬಿಳಿ ಜನಾಂಗೀಯ ತಾರತಮ್ಯ, ಶೋಷಣೆಗಳೆಲ್ಲ ನಡೆಯದಂತೆ ಕಾನೂನು ಇರಬಹುದು. ಆದರೆ, ನಮ್ಮ ತಲೆಯಿಂದ ಅದು ಹೋಗಿಲ್ಲ’ ಎಂದು ವಿಷಾದಿಸಿದರು.

ಮಾನವೀಯ ಅಂತಃಕರಣವನ್ನು ತಲ್ಲಣಗೊಳಿಸದ ಸಾಹಿತ್ಯವು ಸಾಹಿತ್ಯವೇ ಅಲ್ಲ ಎಂದು ಕೃತಿಕಾರ ಕಾ.ತ. ಚಿಕ್ಕಣ್ಣ ಹೇಳಿದರು. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌ ಕೃತಿ ಪರಿಚಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.