ADVERTISEMENT

’ಆಫ್ರಿಕನ್ ಕಿಚನ್’ ಹೆಸರಿನಲ್ಲಿ ಅಕ್ರಮ ಮದ್ಯ

* ನೈಜೀರಿಯಾ ಪ್ರಜೆ ಬಂಧನ * ಕಾನ್‌ಸ್ಟೆಬಲ್‌ ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 4:29 IST
Last Updated 6 ಏಪ್ರಿಲ್ 2021, 4:29 IST

ಬೆಂಗಳೂರು: ‘ಆಫ್ರಿಕನ್ ಕಿಚನ್’ ಹೆಸರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಜೋಹಾನ್ಸ್ ವಿಯಿಗ್ವಿಂಗಿಫೆರಿ ಕೆನಿಗಯ್ (46) ಎಂಬಾತನನ್ನು 1 ಕಿ.ಮೀ.ವರೆಗೆ ಬೆನ್ನಟ್ಟಿ ಹೆಣ್ಣೂರು ಪೊಲೀಸರು ಸೆರೆಹಿಡಿದಿದ್ದಾರೆ.

‘ನೈಜೀರಿಯಾದ ಜೋಹಾನ್ಸ್, ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದ. ನಗರದಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ‘ಆಫ್ರಿಕನ್ ಕಿಚನ್‘ ಹೆಸರಿನಲ್ಲಿ ಅಕ್ರಮವಾಗಿ ಮದ್ಯ ಪೂರೈಕೆ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ. ಆತನಿಂದ 103 ಲೀಟರ್ ಮದ್ಯ, ಮಾರಕಾಸ್ತ್ರ ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ, ಇತ್ತೀಚೆಗಷ್ಟೇ ಜಾಮೀನು ಮೇಲೆ ಹೊರಬಂದಿದ್ದ. ಪುನಃ ಅಕ್ರಮ ಮದ್ಯ ಮಾರಲಾರಂಭಿಸಿದ್ದ. ಈತನ ಬಗ್ಗೆ ಮನೆ ಮಾಲೀಕರು ದೂರು ನೀಡಿದ್ದರು’ ಎಂದೂ ತಿಳಿಸಿದರು.

ADVERTISEMENT

ಮನೆ ಮಾಲೀಕರಿಗೆ ಬೆದರಿಕೆ: ‘ಮೂರು ವರ್ಷಗಳ ಹಿಂದೆ ವಾಣಿಜ್ಯ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿ, ಬಾಡಿಗೆ ಮನೆಯಲ್ಲಿ ವಾಸವಿದ್ದ. ಅದೇ ಮನೆಯಲ್ಲೇ ಅಕ್ರಮ ಚಟುವಟಿಕೆ ನಡೆಸುತ್ತಿದ್ದ. ಅದನ್ನು ಪ್ರಶ್ನಿಸಿದ್ದ ಮನೆ ಮಾಲೀಕರಿಗೂ ಜೀವ ಬೆದರಿಕೆಯೊಡ್ಡಿದ್ದ’ ಎಂದೂ ಪೊಲೀಸರು ಹೇಳಿದರು.

‘ಮನೆಯಲ್ಲೇ ಸ್ನೇಹಿತರ ಜತೆ ಪಾರ್ಟಿ ಮಾಡುತ್ತಿದ್ದ ಆತ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಪಾರ್ಟಿಯಿಂದಾಗಿ ಮನೆ ಮಾಲೀಕರಿಗೆ ಹಾಗೂ ಸ್ಥಳೀಯರಿಗೆ ತೊಂದರೆ ಸಹ ಆಗುತ್ತಿತ್ತು’ ಎಂದೂ ಹೇಳಿದರು.

ಕಾನ್‌ಸ್ಟೆಬಲ್ ಕೊಲೆಗೂ ಯತ್ನ; ‘ಭಾನುವಾರ ರಾತ್ರಿ ಆರೋಪಿಗಳು ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು. ಮಾಹಿತಿ ಬರುತ್ತಿದ್ದಂತೆ ಇನ್‌ಸ್ಪೆಕ್ಟರ್ ವಸಂತಕುಮಾರ್ ನೇತೃತ್ವದ ತಂಡವು ಸ್ಥಳಕ್ಕೆ ಹೋಗಿತ್ತು’ ಎಂದು ಪೊಲೀಸರು ಹೇಳಿದರು.

‘ಪೊಲೀಸರನ್ನು ಕಂಡ ಆರೋಪಿ, ಮಾರಕಾಸ್ತ್ರ ತೋರಿಸಿ ಹಲ್ಲೆಗೆ ಮುಂದಾಗಿದ್ದ. ನಂತರ ಮನೆಯಿಂದ ಹೊರಗೆ ತಪ್ಪಿಸಿಕೊಂಡು ಬಂದು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಎದುರಿಗೆ ತಡೆಯಲು ಬಂದ ಕಾನ್‌ಸ್ಟೇಬಲ್‌ ಅವರಿಗೆ ಕಾರು ಗುದ್ದಿಸಿ ಕೊಲೆಗೆ ಯತ್ನಿಸಿದ್ದ. ನಂತರ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ತೆರಳುತ್ತಿದ್ದ. ಇನ್‌ಸ್ಪೆಕ್ಟರ್ ಹಾಗೂ ತಂಡವರು, 1 ಕಿ. ಮೀ.ವರೆಗೂ ಬೆನ್ನಟ್ಟಿ ಕಾರು ಅಡ್ಡಗಟ್ಟಿ ಆರೋಪಿಯನ್ನು ಬಂಧಿಸಿದ್ದಾರೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.