ಬೆಂಗಳೂರು: ದೇವನಹಳ್ಳಿಯಲ್ಲಿ 13 ಹಳ್ಳಿಗಳ ರೈತರ 1,777 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬುಧವಾರ ಸಾಹಿತಿಗಳು, ಕನ್ನಡ ಚಿತ್ರರಂಗದ ಕಲಾವಿದರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಹಿತಿ ರಹಮತ್ ತರೀಕೆರೆ ಮಾತನಾಡಿ, ‘ರೈತರು ಭೂಮಿ ಕೊಡುವುದಿಲ್ಲ ಎಂದಾಗ ಸರ್ಕಾರ ಕಿತ್ತುಕೊಳ್ಳುವ ಕೆಲಸ ಮಾಡಬಾರದು. ಇದು ರೈತರ ಹೋರಾಟ ಮಾತ್ರವಲ್ಲ, ಎಲ್ಲ ಕನ್ನಡಿಗರ, ಹೊಟ್ಟೆಗೆ ಅನ್ನ ತಿನ್ನುವವರ ಹೋರಾಟ’ ಎಂದು ಸಾಹಿತಿ ರಹಮತ್ ತರೀಕೆರೆ ತಿಳಿಸಿದರು.
ರೈತರು ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಗಳು ಈ ಬಗ್ಗೆ ಚರ್ಚೆ ಮಾಡದೇ, ಭೂಮಿ ಹೇಗೆ ಕಿತ್ತುಕೊಳ್ಳಬೇಕೆಂದು ಯೋಚಿಸುತ್ತಿದೆ. ಜುಲೈ 4ರಂದು ರೈತರ ಪರವಾಗಿ ತೀರ್ಮಾನವಾಗಬೇಕು ಎಂದು ಆಗ್ರಹಿಸಿದರು.
ನಟ ಕಿಶೋರ್ ಕುಮಾರ್ ಮಾತನಾಡಿ, ‘ಅಭಿವೃದ್ಧಿ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ. ನಮ್ಮ ಅನ್ನದ ಮೇಲೆ ದಾಳಿ ನಡೆಯುತ್ತಿದೆ. ಸಣ್ಣ ರೈತರ ಕೈಯಲ್ಲಿರುವ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ರೈತರು ಹೊಲ, ಗದ್ದೆಗಳಲ್ಲಿ ಮಾಡುವ ಕೌಶಲಪೂರ್ಣ ಕೆಲಸಗಳನ್ನು ಕಾರ್ಖಾನೆಗಳಿಂದ ಕೊಡಲು ಸಾಧ್ಯವಿಲ್ಲ. ಕಾರ್ಖಾನೆಗಳಲ್ಲಿ ಅನ್ನ ಬೆಳೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.
ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ‘ರೈತರ ಭೂಮಿಯನ್ನು ಕಿತ್ತುಕೊಳ್ಳುವ ಮೂಲಕ ಇಡೀ ಸಮಾಜದ ಅನ್ನವನ್ನು ಕಸಿಯಲಾಗುತ್ತಿದೆ. ಕಾರ್ಪೊರೇಟ್ ಲಾಬಿ ನಮ್ಮನ್ನು ಆಳುತ್ತಿದೆ. ಇದರ ವಿರುದ್ಧ ಸಮಗ್ರ ಹೋರಾಟ ಮಾಡಬೇಕು’ ಎಂದರು.
ಚಿತ್ರ ನಿರ್ದೇಶಕರ ನಂಜುಂಡೇಗೌಡ ಮಾತನಾಡಿ, ‘ಅನ್ನ ನೀಡುವ ರೈತರ ಹೋರಾಟವನ್ನು ಚಿತ್ರರಂಗ ಸದಾ ಬೆಂಬಲಿಸುತ್ತದೆ. ನೆಲ, ಜಲ, ಆಹಾರ, ಭಾಷೆ ಮೇಲಿನ ದಾಳಿಗಳನ್ನು ಸಹಿಸುವುದಿಲ್ಲ’ ಎಂದು ತಿಳಿಸಿದರು.
ನಿರ್ದೇಶಕರಾದ ರಾಜೇಂದ್ರಸಿಂಗ್ ಬಾಬು, ಟಿ.ಎನ್. ಸೀತಾರಾಮ್, ನಾಗತೀಹಳ್ಳಿ ಚಂದ್ರಶೇಖರ್, ವಿಜಯಲಕ್ಷ್ಮಿ ಸಿಂಗ್, ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ, ಬಹುಭಾಷಾ ನಟ ಪ್ರಕಾಶ್ ರಾಜ್, ನಟಿ ಅಕ್ಷತಾ ಪಾಂಡವಪುರ ಹೋರಾಟದಲ್ಲಿ ಪಾಲ್ಗೊಂಡರು.
ಹೋರಾಟಗಾರರಾದ ಶಿವಸುಂದರ್, ಸಾಹಿತಿ ಕೆ.ಪಿ. ಸುರೇಶ್, ವೀರಸಂಗಯ್ಯ, ಬಿ.ಟಿ. ಲಲಿತಾ ನಾಯಕ್, ನೂರ್ ಶ್ರೀಧರ್, ವಿ. ನಾಗರಾಜ್, ಗುರುಪ್ರಸಾದ್ ಕೆರೆಗೋಡು, ಇಂದೂಧರ ಹೊನ್ನಾಪುರ, ಬಡಗಲಪುರ ನಾಗೇಂದ್ರ, ಕೆ.ವಿ. ಭಟ್ ಉಪಸ್ಥಿತರಿದ್ದರು.
ಉಪವಾಸ ಸತ್ಯಾಗ್ರಹ
ಸಂಯುಕ್ತ ಹೋರಾಟ-ಕರ್ನಾಟಕದ ಡಿ.ಎಚ್. ಪೂಜಾರಿ ಯಶವಂತ ಚುಕ್ಕಿ ನಂಜುಂಡಸ್ವಾಮಿ ಎಸ್.ವರಲಕ್ಷ್ಮೀ ದೇವಿ ಲಕ್ಷ್ಮಣ ಮಂಡಲಗೇರಾ ಮಲ್ಲಿಗೆ ಸಿರಿಮನೆ ಮತ್ತು ಪ್ರಭಾ ಬೆಳವಂಗಲ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.