ADVERTISEMENT

ದಲಿತ, ರೈತ ಚಳವಳಿಯಲ್ಲಿ ಹೋರಾಟದ ಸಾಹಿತ್ಯ: ರಾಮಚಂದ್ರೇಗೌಡ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 15:08 IST
Last Updated 9 ನವೆಂಬರ್ 2025, 15:08 IST
‘ಕನ್ನಡದಲ್ಲಿ ಹೋರಾಟದ ಸಾಹಿತ್ಯ ಏಕಿಲ್ಲ?’ ಗೋಷ್ಠಿಯಲ್ಲಿ ಸುನಂದಾ ಜಯರಾಮ್, ಹಿ.ಶಿ. ರಾಮಚಂದ್ರೇಗೌಡ, ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಟಿ.ಎಚ್. ಲವಕುಮಾರ್ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
‘ಕನ್ನಡದಲ್ಲಿ ಹೋರಾಟದ ಸಾಹಿತ್ಯ ಏಕಿಲ್ಲ?’ ಗೋಷ್ಠಿಯಲ್ಲಿ ಸುನಂದಾ ಜಯರಾಮ್, ಹಿ.ಶಿ. ರಾಮಚಂದ್ರೇಗೌಡ, ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಟಿ.ಎಚ್. ಲವಕುಮಾರ್ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದಲಿತ ಹಾಗೂ ರೈತ ಚಳವಳಿಗಳಲ್ಲಿ ಹೋರಾಟದ ಸಾಹಿತ್ಯವನ್ನು ಕಾಣಬಹುದು’ ಎಂದು ವಿದ್ವಾಂಸ ಹಿ.ಶಿ. ರಾಮಚಂದ್ರೇಗೌಡ ಹೇಳಿದರು. 

ಸಮಾಜಮುಖಿ ಪತ್ರಿಕೆ ಆಯೋಜಿಸಿದ್ದ ಸಮಾಜಮುಖಿ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡದಲ್ಲಿ ಹೋರಾಟದ ಸಾಹಿತ್ಯ ಏಕಿಲ್ಲ?’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು. 

ರೈತ ಚಳವಳಿಯಲ್ಲಿ ಜಾತ್ಯತೀತತೆ, ಕೃಷಿಯ ಸಮಗ್ರ ಚಿಂತನೆ, ನಾಯಕತ್ವ ಇತ್ತು. ಅಂತರ್‌ ಜಾತಿ ವಿವಾಹಗಳನ್ನು ಮಾಡಲಾಗುತ್ತಿತ್ತು. ಎಲ್ಲ ಸಮುದಾಯದವರು ಇದರಲ್ಲಿ ಪಾಳ್ಗೊಳ್ಳಲು ಅವಕಾಶ ಇತ್ತು. ಎಂ.ಡಿ. ನಂಜುಂಡಸ್ವಾಮಿ ಅವರು ರೈತರಲ್ಲಿ ಸ್ವಾಭಿಮಾನ ಬೆಳೆಸಿದ್ದರು. ನೆಲ ಹಾಗೂ ಜನ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿದ್ದರು. ಆದರೆ, ಈಗ ರೈತ ಚಳವಳಿಗಳು ತುಂಡು ತುಂಡಾಗಿದ್ದು, ಬೇಡಿಕೆಗೆ ಸೀಮಿತವಾಗಿವೆ. ಇದಕ್ಕೆ ಕಾರಣ ಕಾರ್ಪೊರೇಟ್‌ ಪರವಾದ ನೀತಿಗಳು ಎಂದು ದೂರಿದರು.

ADVERTISEMENT

‘ಹಿಂದೆ ರೈತ ಹಾಗೂ ದಲಿತ ಚಳವಳಿಗಳ ಮೇಲೆ ಸಾಹಿತ್ಯದ ಪ್ರಭಾವವಿತ್ತು. ಆದರೆ ಈಗ ಇಲ್ಲ. ಒಟ್ಟು ಜನರನ್ನು ಒಳಗೊಳ್ಳುವ ಸಾಹಿತ್ಯ ಬೇಕಿದೆ. ರೈತ ಮತ್ತು ದಲಿತ ಚಳವಳಿ ಪ್ರಬಲವಾಗಿಲ್ಲ’ ಎಂದರು.   

ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ, ‘ಹೋರಾಟದ ಹಾಡುಗಳಲ್ಲಿ ಬದುಕನ್ನು ಹಸನುಗೊಳಿಸುವ ಸಾಹಿತ್ಯ ಅಡಕವಾಗಿದೆ. ಆದರೆ ಸಾಹಿತ್ಯ ಲೋಕ ಈ ಹೋರಾಟದ ಹಾಡುಗಳನ್ನು ಸಾಹಿತ್ಯವೆಂದು ಪರಿಗಣಿಸುತ್ತಿಲ್ಲ. ಈ ನೆಲಕ್ಕೆ ಬೇಕಾದ ನಿಜವಾದ ಸಾಹಿತ್ಯವೇ ಹೋರಾಟದ ಹಾಡುಗಳಾಗಿವೆ. ಕರ್ನಾಟಕದಲ್ಲಿ ಹೋರಾಟದ ಭಾಗವಾಗಿ ಬಂದ ಎಲ್ಲ ಹಾಡುಗಳೂ ಹೋರಾಟದ ಸಾಹಿತ್ಯವೇ ಆಗಿದೆ’ ಎಂದು ತಿಳಿಸಿದರು.

ರೈತ ಪರ ಹೋರಾಟಗಾರ್ತಿ ಸುನಂದಾ ಜಯರಾಮ್ ಮಾತನಾಡಿ, ‘ಕನ್ನಡ ಸಾಹಿತ್ಯದಲ್ಲಿ ರೈತ ಹೋರಾಟ, ದಲಿತ ಹೋರಾಟ ಮತ್ತು ಮಹಿಳಾ ಹೋರಾಟವನ್ನು ಬೇರೆ ಬೇರೆ ಪ್ರಕಾರದಲ್ಲಿ ದಾಖಲಿಸಲಾಗಿದೆ. ಆದರೂ ರೈತನ ಸ್ಥಿತಿ ಗತಿಯ ಕುರಿತು ಹೆಚ್ಚು ಸಾಹಿತ್ಯ ಬರಬೇಕಿದೆ’ ಎಂದರು.

ಅಧ್ಯಾಪಕ ಲವಕುಮಾರ್ ಗೋಷ್ಠಿಯನ್ನು ನಿರ್ವಹಣೆ ಮಾಡಿದರು.

‘ಭಾಷೆಯ ಬಳಕೆಯಲ್ಲಿ ಏಕತಾನತೆ

ಬೆಂಗಳೂರು: ಇಂದಿನ ಕತೆ ಕವಿತೆ ಕಾದಂಬರಿ ಬರೆಯುತ್ತಿರುವ ಹೊಸ ತಲೆಮಾರಿನ ಲೇಖಕರು ಬಳಸುವ ಭಾಷೆ ಒಂದೇ ರೀತಿಯಾಗಿದೆ. ಇದರಲ್ಲಿ ಏಕತಾನತೆ ಕಾಡುತ್ತಿದೆ ಎಂದು ವಿಮರ್ಶಕ ರಂಗನಾಥ ಕಂಟನಕುಂಟೆ ಹೇಳಿದರು.  ‘ಇಂದಿನ ಮುಂದಿನ ಸಾಹಿತ್ಯದಲ್ಲಿ ಭಾಷಾ ಬಳಕೆ–ಸುಲಭ ಭಾಷೆ ಹೆಣ್ಣು ಭಾಷೆ ತಂತ್ರಾಂಶದ ಭಾಷೆ ಭವಿಷ್ಯದ ಭಾಷೆ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.  ‘ಸುಲಭ ಭಾಷೆಯ ಅಪಾಯ ಈಗ ಕಾಣಿಸುತ್ತಿದ್ದು ಮುಂದಿನ ದಿನಗಳಲ್ಲಿ ಅದು ಹೆಚ್ಚು ಕಾಡುತ್ತದೆ. ಸುಲಭ ಭಾಷೆ ಬಂದಿದೆ ಎಂದರೆ ಎಲ್ಲವೂ ಸುಲಭವಾಗಿಲ್ಲ. ವಿಮರ್ಶೆ ಕೂಡ ಸುಲಭ ಭಾಷೆಯಲ್ಲಿ ಬರುತ್ತಿದೆ. ಇದು ಸಾಹಿತ್ಯದ ಭಾಷಾ ಸಾಧ್ಯತೆಗಳನ್ನು ಕೊಂದು ಹಾಕುತ್ತದೆ’ ಎಂದರು. ಮೇಟಿ ಮಲ್ಲಿಕಾರ್ಜುನ ಮಾತನಾಡಿ ‘ಪ್ರಸ್ತುತ ದಿನಗಳಲ್ಲಿ ಕವಿಗಳು ಕತೆಗಾರರು ಕೇವಲ ಶೋಕಿಗಾಗಿ ಪ್ರಶಸ್ತಿಗಾಗಿ ಒಂದೇ ಆಯಾಮದಲ್ಲಿ ಬರೆಯುತ್ತಿದ್ದಾರೆ. ನಿರ್ದಿಷ್ಟವಾದ ಮಾದರಿಯಲ್ಲಿ ಕತೆ ಕವಿತೆ ಕಾದಂಬರಿಗಳನ್ನು ಬರೆದು ಪ್ರಶಸ್ತಿಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರ ಆಚೆಗೂ ಗಂಭೀರವಾಗಿ ಸಾಹಿತ್ಯ ರಚಿಸುವವರು ಓದುವವರು ಇದ್ದಾರೆ. ಪ್ರಶಸ್ತಿಗಳನ್ನು ತೆಗೆದುಕೊಳ್ಳುವವರು ಪತ್ರಿಕೆಗಳಲ್ಲಿ ಹೆಸರು ಬರುವವರರ ಸಾಹಿತ್ಯವನ್ನು ಮಾತ್ರ ವಿಶ್ಲೇಷಣೆ ಮಾಡಿದರೆ ಅದು ಅಪಾಯಕಾರಿ’ ಎಂದು ಹೇಳಿದರು.   ಲೇಖಕಿ ಆರ್. ಸುನಂದಮ್ಮ ಮಾತನಾಡಿ ‘ದಲಿತರು ಮಹಿಳೆಯರು ಆದೇಶಗಳನ್ನು ತೆಗೆದುಕೊಂಡು ಬದುಕಿದವರು. ಈಗ ನಾವು ಆದೇಶಗಳನ್ನು ನೀಡುವ ಕಾಲದಲ್ಲಿದ್ದೇವೆ. ಇದು ಸಂಘರ್ಷವನ್ನು ಹುಟ್ಟು ಹಾಕುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.