ಬೆಂಗಳೂರು: ಮದುವೆಗೆಂದು ನೀಡಿದ್ದ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಸಿಟ್ಟಿಗೆದ್ದ ಸಾಲಗಾರನೊಬ್ಬ ಮಹಿಳೆಯ ಮನೆಗೆ ಬೆಂಕಿ ಹಾಕಿದ್ದು, ಈ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವೇಕನಗರದ ಎರಡನೇ ಮುಖ್ಯರಸ್ತೆಯಲ್ಲಿ ಜುಲೈ 1ರಂದು ಸಂಜೆ ಘಟನೆ ನಡೆದಿದೆ.
ಸುಬ್ರಮಣಿ ಎಂಬಾತ ವೆಂಕಟರಮಣಿ ಅವರ ಮನೆಗೆ ಬೆಂಕಿಯಿಟ್ಟಿದ್ದಾನೆ. ವೆಂಕಟರಮಣಿ ಅವರ ಪುತ್ರ ನೀಡಿರುವ ದೂರಿನ ಮೇರೆಗೆ ಸುಬ್ರಮಣಿ, ಆತನ ಸಹೋದರಿ ಪಾರ್ವತಿ, ಪುತ್ರಿ ಮಹಾಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಸುಬ್ರಮಣಿಯ ಸಹೋದರಿ ಪಾರ್ವತಿ, ತನ್ನ ಪುತ್ರಿಯ ಮದುವೆಗಾಗಿ ವೆಂಕಟರಮಣಿಯ ಬಳಿ ಎಂಟು ವರ್ಷಗಳ ಹಿಂದೆ ₹5 ಲಕ್ಷ ಹಣ ಪಡೆದಿದ್ದಳು. ಆದರೆ, ಸಾಲವನ್ನು ವಾಪಸ್ ನೀಡಿರಲಿಲ್ಲ. ವೆಂಕಟರಮಣಿ ಅವರು ಸಾಲ ವಾಪಸ್ ಕೊಡುವಂತೆ ಕೇಳಿದ್ದರು. ಆಗ ಮನೆಯ ಬಳಿಗೆ ಪಾರ್ವತಿ ಮತ್ತು ಆಕೆಯ ಪುತ್ರಿ ಬಂದು ಜೀವ ಬೆದರಿಕೆ ಹಾಕಿದ್ದರು. ಇದೇ ವಿಚಾರಕ್ಕೆ ಸಿಟ್ಟಾದ ಆರೋಪಿ, ಜುಲೈ 1ರಂದು ಸಂಜೆ 5ರ ಸುಮಾರಿಗೆ ವೆಂಕಟರಮಣಿ ಮತ್ತು ಅವರ ಪುತ್ರ ಮನೆಯಲ್ಲಿದ್ದಾಗ ಪೆಟ್ರೋಲ್ ಸುರಿದ ಬೆಂಕಿ ಹಾಕಿದ್ದಾನೆ’ ಎಂದು ದೂರು ನೀಡಲಾಗಿದೆ.
‘ಘಟನೆಯಿಂದ ಮನೆಯ ಎದುರು ಬಾಗಿಲು ಹಾಗೂ ಕಿಟಕಿ ಸುಟ್ಟು ಹೋಗಿದೆ. ಬಟ್ಟೆಗಳು ಸುಟ್ಟಿವೆ. ಆರೋಪಿಯ ಕೃತ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.