ADVERTISEMENT

ಲಾಡ್ಜ್ ಸ್ಟಾರ್‌ ಸೌತ್ ಶತಮಾನೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 19:45 IST
Last Updated 5 ನವೆಂಬರ್ 2022, 19:45 IST
ಅಣ್ಣಾಸ್ವಾಮಿ ಅಕಾಡೆಮಿಯಲ್ಲಿನ ಸ್ಕೈಲೈಟ್‌ ಶಾಲೆಗೆ ಮಾಂಟೆಸ್ಸರಿ ಸಲಕರಣೆಗಳನ್ನು ಅನಿಶ್‌ಕುಮಾರ್ ಶರ್ಮಾ ಹಸ್ತಾಂತರ ಮಾಡಿದರು. ಲಾಡ್ಜ್ ಸ್ಟಾರ್‌ನ ಬೆಂಗಳೂರು ಸಹಾಯಕ ಪ್ರಾದೇಶಿಕ ಗ್ರ್ಯಾಂಡ್ ಮಾಸ್ಟರ್ ಸುರೇಶ್‌ಬಾಬು, ವಿ.ಜಿ.ಮಧುಸೂದನ್, ಅಣ್ಣಾಸ್ವಾಮಿ ಮುದಲಿಯಾರ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಅನಂತ್ ರಾಮ್, ಲಾಡ್ಜ್ ಸ್ಟಾರ್ ಆಫ್ ಸೌತ್ ಮುಖ್ಯಸ್ಥ ಮಹೇಂದ್ರ ಕುಮಾರ್ ಡಿ. ಪಟೇಲ್ ಇದ್ದರು –ಪ್ರಜಾವಾಣಿ ಚಿತ್ರ
ಅಣ್ಣಾಸ್ವಾಮಿ ಅಕಾಡೆಮಿಯಲ್ಲಿನ ಸ್ಕೈಲೈಟ್‌ ಶಾಲೆಗೆ ಮಾಂಟೆಸ್ಸರಿ ಸಲಕರಣೆಗಳನ್ನು ಅನಿಶ್‌ಕುಮಾರ್ ಶರ್ಮಾ ಹಸ್ತಾಂತರ ಮಾಡಿದರು. ಲಾಡ್ಜ್ ಸ್ಟಾರ್‌ನ ಬೆಂಗಳೂರು ಸಹಾಯಕ ಪ್ರಾದೇಶಿಕ ಗ್ರ್ಯಾಂಡ್ ಮಾಸ್ಟರ್ ಸುರೇಶ್‌ಬಾಬು, ವಿ.ಜಿ.ಮಧುಸೂದನ್, ಅಣ್ಣಾಸ್ವಾಮಿ ಮುದಲಿಯಾರ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಅನಂತ್ ರಾಮ್, ಲಾಡ್ಜ್ ಸ್ಟಾರ್ ಆಫ್ ಸೌತ್ ಮುಖ್ಯಸ್ಥ ಮಹೇಂದ್ರ ಕುಮಾರ್ ಡಿ. ಪಟೇಲ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಡ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ದಕ್ಷಿಣ ಭಾರತದ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾದ ಲಾಡ್ಜ್‌ ಸ್ಟಾರ್‌ ಸೌತ್ ನಂ. 101 ಈಗ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಅಣ್ಣಾಸ್ವಾಮಿ ಅಕಾಡೆಮಿಯಲ್ಲಿನ ಸ್ಕೈಲೈಟ್ ಶಾಲೆಯಲ್ಲಿ ಶನಿವಾರ ಶತಮಾನೋತ್ಸವ ಆಚರಿಸಲಾಯಿತು.

ಭಾರತದ ಗ್ರ್ಯಾಂಡ್ ಲಾಡ್ಜ್‌ನ ಗ್ರ್ಯಾಂಡ್ ಮಾಸ್ಟರ್ ಅನಿಶ್‌ಕುಮಾರ್ ಶರ್ಮಾ ಮತ್ತು ದಕ್ಷಿಣ ಭಾರತದ ಪ್ರಾದೇಶಿಕ ಗ್ರ್ಯಾಂಡ್ ಮಾಸ್ಟರ್ ವಿಂಜಮೂರ್ ಗೋವಿಂದರಾಜ್ ಮಧುಸೂದನ್ ಸೇರಿ ಹಲವರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

1921ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಸದ್ಯ 784 ಸದಸ್ಯರನ್ನು ಹೊಂದಿದೆ.ಇಡೀ ದೇಶದಾದ್ಯಂತ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಈ ಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು ₹7.50 ಲಕ್ಷ ಮೌಲ್ಯದ ಕಲಿಕಾ ಉಪಕರಣಗಳು, ಮಾಂಟೆಸ್ಸರಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಶತಮಾನೋತ್ಸವ ಆಚರಿಸಲಾಯಿತು.

ADVERTISEMENT

‘ಭ್ರಾತೃತ್ವದ ನೆಲೆಯಲ್ಲಿ ಹುಟ್ಟಿಕೊಂಡ ಈ ಸಂಸ್ಥೆಯು 13ನೇ ಶತಮಾನದಿಂದ ತನ್ನ ಬೇರುಗಳನ್ನು ವಿಸ್ತರಿಸಿಕೊಂಡು ಬಂದಿದೆ. ದೇಶದಲ್ಲಿ 400ಕ್ಕೂ ಹೆಚ್ಚು ಘಟಕಗಳನ್ನು ಹೊಂದಿದೆ. 100 ವರ್ಷಗಳನ್ನು ದಾಟಿರುವ ಹಲವು ಸಂಸ್ಥೆಗಳು ಇವೆ. ಬೆಂಗಳೂರಿನ ಲಾಡ್ಜ್‌ ಸ್ಟಾರ್ ಆಫ್‌ ಸೌತ್ ನಂ 101 ಕೂಡ ಶತಮಾನ ಪೂರೈಸಿದೆ. ದಾನ ಮಾಡಲು ಬೇಸರಿಸಿಕೊಳ್ಳದೆ ಕೈಲಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅನಿಶ್‌ಕುಮಾರ್ ಶರ್ಮಾ ಹೇಳಿದರು.

‘ಬಡವರಿಗೆ ಅನ್ನದಾನ ಮಾಡುವ ಬದಲು ಶಿಕ್ಷಣ ನೀಡುವುದರಿಂದ ಇಡೀ ಸಮುದಾಯ ಬಲಗೊಳ್ಳುತ್ತದೆ ಎಂಬುದನ್ನು ನಾವು ನಂಬಿದ್ದೇವೆ. ಅನ್ನ ಮತ್ತು ಹಣ ಸಂಪಾದಿಸುವ ಶಕ್ತಿಯನ್ನು ಒಳ್ಳೆಯ ಶಿಕ್ಷಣ ನೀಡುತ್ತದೆ’ ಎಂದು ಲಾಡ್ಜ್ ಸ್ಟಾರ್ ಆಫ್ ಸೌತ್ ಮುಖ್ಯಸ್ಥ ಮಹೇಂದ್ರ ಕುಮಾರ್ ಡಿ. ಪಟೇಲ್ ಹೇಳಿದರು.

‘ಉತ್ತಮ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ದಾನವು ಸಹಾನುಭೂತಿಯ ಅವಿಭಾಜ್ಯ ಅಂಗ. ನಮ್ಮಲ್ಲಿರುವ ಸಣ್ಣ ಮೂಲಗಳಿಂದ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇವೆ’ ಎಂದು ಮಧುಸೂದನ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.