ADVERTISEMENT

ಸರ್ಕಾರದಲ್ಲಿ ನಮಗೆ ಸಿಕ್ಕಿದ ಕೆಲಸ ವಿಶೇಷಾಧಿಕಾರ ಅಲ್ಲ: ಲೋಕಾಯುಕ್ತ

.

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 18:12 IST
Last Updated 15 ಸೆಪ್ಟೆಂಬರ್ 2025, 18:12 IST
ಬೆಂಗಳೂರು ಜಲಮಂಡಳಿಯ ಜಾಗೃತಿ ಸಪ್ತಾಹದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ಅಧ್ಯಕ್ಷ ರಾಮಪ್ರಸಾತ್‌ ಮನೋಹರ್‌ ಗೌರವಿಸಿದರು.
ಬೆಂಗಳೂರು ಜಲಮಂಡಳಿಯ ಜಾಗೃತಿ ಸಪ್ತಾಹದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ಅಧ್ಯಕ್ಷ ರಾಮಪ್ರಸಾತ್‌ ಮನೋಹರ್‌ ಗೌರವಿಸಿದರು.   

ಬೆಂಗಳೂರು: ‘ಸರ್ಕಾರದಲ್ಲಿ ನಮಗೆ ಸಿಕ್ಕಿದ ಕೆಲಸ ವಿಶೇಷಾಧಿಕಾರ ಅಲ್ಲ. ಅದು ನಮ್ಮ ಕರ್ತವ್ಯ ಎಂದು ಭಾವಿಸಿ ಜಾಗೃತರಾಗಿ ಕೆಲಸ ಮಾಡಬೇಕು. ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆಯನ್ನು ನೌಕರರು ಬಿಡಬೇಕು ́ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್‌ ಹೇಳಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜಾಗೃತಿ ಸಪ್ತಾಹ- 2025ರ ಅಂಗವಾಗಿ ಮಂಡಳಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ನೌಕರರಿಗೆ ಸರ್ಕಾರವು ವೇತನ ನೀಡುತ್ತದೆ. ಈ ವೇತನಕ್ಕೆ ಬೇಕಾದ ಹಣವನ್ನು ವಿವಿಧ ರೂಪದಲ್ಲಿ ಪಡೆಯುತ್ತದೆ. ಕೆಲಸ ಮಾಡುವಾಗ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜನರ ಸೇವಕರಾಗಿ ಕರ್ತವ್ಯ ನಿರ್ವಹಿಸಬೇಕು. ಅಂತಹ ಸಂದರ್ಭದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ́ ಎಂದರು.

ADVERTISEMENT

‘ಪ್ರತಿಯೊಬ್ಬರಲ್ಲೂ ವಿಶೇಷವಾದ ಶಕ್ತಿ ಇರುತ್ತದೆ. ಇದನ್ನು ನಾವೇ ಆಗಾಗ ಎಚ್ಚರಿಸಿಕೊಂಡರೆ ಅಂದುಕೊಂಡ ಕೆಲಸವನ್ನು ಶ್ರೇಷ್ಠತೆಯೊಂದಿಗೆ ಸಾಧಿಸಲು ಸಾಧ್ಯವಾಗುತ್ತದೆ. ಅಲ್ಲದೇ ಸೂಕ್ತ ಗುರಿಯೊಂದಿಗೆ ಕೆಲಸ ಮಾಡಿದರೆ ಶ್ರೇಷ್ಠ ರಾಷ್ಟ್ರ ನಿರ್ಮಾಣ ಮಾಡಬಹುದು ́ ಎಂದರು.

ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ‘ನಗರದ 1.40 ಕೋಟಿ ಜನರಿಗೆ ನೀರು ಪೂರೈಸಲು ಜಲಮಂಡಳಿ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಇದರ ಪರಿಣಾಮ ಹಲವು ಪ್ರಶಸ್ತಿಗಳು ಮಂಡಳಿಗೆ ಬಂದಿವೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗಲು ಸಲಹೆ ನೀಡಬೇಕು’ ಎಂದು ಕೋರಿದರು.

ಕೆಳ ಹಂತದಿಂದ ಮೇಲ್ಮಟ್ಟದಲ್ಲಿರುವ ಎಲ್ಲಾ ಸಿಬ್ಬಂದಿ ಅಧಿಕಾರಿಗಳು ಕೆಲಸ ಮಾಡಬೇಕು. ಕೆಲವರು ಮಾತ್ರ ಕೆಲಸ ಮಾಡಿ ಉಳಿದವರು ತಮ್ಮ ಪಾಡಿಗಿದ್ದರೆ ಸಾಧನೆ ಅಸಾಧ್ಯ
– ಬಿ.ಎಸ್‌.ಪಾಟೀಲ್‌, ಲೋಕಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.