ADVERTISEMENT

ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಂದ ದೂರು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 19:52 IST
Last Updated 1 ಡಿಸೆಂಬರ್ 2018, 19:52 IST

ಬೆಂಗಳೂರು: ‘ಲಾಲ್‌ಬಾಗ್‌ನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯುವುವಲ್ಲಿ ವಿಫಲರಾಗಿದ್ದೀರಿ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಹಾಗೂ ತೋಟಗಾರಿಕಾ ಇಲಾಖೆ ನಿರ್ದೇಶಕರ ವಿರುದ್ಧ ಲೋಕಾಯುಕ್ತರು ಕೆಂಗಣ್ಣು ಬೀರಿದ್ದಾರೆ.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ‘ಲಾಲ್‌ಬಾಗ್‌ ಕಸದ ತೊಟ್ಟಿಯಂತಾಗಿದೆ’ ಎಂಬ ಆಕ್ಷೇಪಣೆ ಕೇಳಿಬಂದ ಕಾರಣ, ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಈ ದೂರು ದಾಖಲಿಸಿಕೊಂಡಿದ್ದಾರೆ.

ಬಿಬಿಎಂಪಿ ಆಯುಕ್ತ, ದಕ್ಷಿಣ ವಲಯದ ಜಂಟಿ ಆಯುಕ್ತ, ಬಿಬಿಎಂಪಿ ಆರೋಗ್ಯ ಮತ್ತು ಆಡಳಿತ ವಿಭಾಗದ ವಿಶೇಷ ಆಯುಕ್ತ, ತೋಟಗಾರಿಕಾ ಇಲಾಖೆಯ ನಿರ್ದೇಶಕ, ಜಂಟಿ ನಿರ್ದೇಶಕ ಮತ್ತು ಉಪ ನಿರ್ದೇಶಕರು ಹಾಗೂ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ್ದಾರೆ.

ADVERTISEMENT

’ನಾಯಿಗಳ ಹಾವಳಿ ತಡೆಯುವಲ್ಲಿ ಮತ್ತು ಕಸ ಬಿಸಾಡುವುದನ್ನು ತಡೆಗಟ್ಟುವಲ್ಲಿ ಏನು ಕ್ರಮ ಕೈಗೊಂಡಿದ್ದೀರಿ ಎಂಬುದರ ಬಗ್ಗೆ ಇದೇ 27ರ ಒಳಗಾಗಿ ವರದಿ ಸಲ್ಲಿಸಿ’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

‘ಲಾಲ್‌ಬಾಗ್‌ ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಬಳಕೆಯಾಗಬೇಕು. ಆದರೆ,ಎಲ್ಲೆಂದರಲ್ಲಿ ತಿಂದು ಬಿಸಾಡಿದ ತ್ಯಾಜ್ಯವೇ ಕಂಡು ಬರುತ್ತದೆ. ಇದರಿಂದಾಗಿ ಇಲ್ಲಿನ ನಡಿಗೆದಾರರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಷ್ಟೇ ಅಲ್ಲ ಲಾಲ್‌ಬಾಗ್ ಒಳಗೆ ಬೀದಿ ನಾಯಿಗಳ ದಾಳಿಗಳೂ ಜಾಸ್ತಿಯಾಗಿವೆ ಎಂಬ ದೂರು ಕೇಳಿ ಬಂದಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ವೈಫಲ್ಯ ಕಂಡು ಬಂದಿದೆ’ ಎಂದು ಅವರು ಆಕ್ಷೇಪಿಸಿದ್ದಾರೆ.

ಈ ಕುರಿತಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಸಾರ್ವಜನಿಕ ಉದ್ಯಾನವನಗಳು) ಡಾ.ಎಂ.ಜಗದೀಶ್‌, ‘ನನಗೆ ಇನ್ನೂ ನೋಟಿಸ್ ಕೈಸೇರಿಲ್ಲ. ಹೀಗಾಗಿ ಈ ಬಗ್ಗೆನಾನು ಏನೂ ಮಾತನಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.