
ಸಚಿವ ಆರ್.ಬಿ. ತಿಮ್ಮಾಪುರ
ಬೆಂಗಳೂರು: ಅಬಕಾರಿ ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಪ್ರಕರಣದಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ನಗರದ ಹುಳಿಮಾವು ನಿವಾಸಿ ಲಕ್ಷ್ಮೀನಾರಾಯಣ ಎಂಬುವವರು ಸೋಮವಾರ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ, ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಮೊಬೈಲ್ ಕರೆಗಳ ವಿವರ, ಪೆನ್ ಡ್ರೈವ್ ಹಾಗೂ ದಾಖಲೆಗಳ ಸಮೇತ ಲೋಕಾಯುಕ್ತ ಎಸ್ಪಿಗೆ ದೂರು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀನಾರಾಯಣ, ‘ಜನವರಿ 17ರಂದು ₹25 ಲಕ್ಷ ಲಂಚ ಪಡೆದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಬಕಾರಿ ಇಲಾಖೆ ಉಪ ಆಯುಕ್ತ ಜಗದೀಶ್ ನಾಯ್ಕ್, ಅಧೀಕ್ಷಕ ತಮ್ಮಣ್ಣ ಮತ್ತು ಕಾನ್‌ಸ್ಟೆಬಲ್ ಲಕ್ಕಪ್ಪ ಗನಿಯನ್ನು ಬಂಧಿಸಿದ್ದರು. ಈ ಸಂಬಂಧ ಪ್ರಕರಣ ಸಹ ದಾಖಲಾಗಿದೆ. ದಾಳಿಗೂ ಮುನ್ನ ಜಗದೀಶ್ ನಾಯ್ಕ್ ಅವರು ಅಬಕಾರಿ ಸಚಿವರಿಗೆ ಲಂಚ ಕೊಡುವ ಬಗ್ಗೆ ಪ್ರಸ್ತಾಪಿಸಿದ್ದರು. ಹೀಗಾಗಿ, ಅಬಕಾರಿ ಸಚಿವರ ವಿರುದ್ಧವೂ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ದೂರು ನೀಡಿದ್ದೇನೆ. ಆಡಿಯೊ ರೆಕಾರ್ಡ್, ಪೆನ್ ಡ್ರೈವ್ ಸೇರಿ ಕೆಲ ದಾಖಲೆಗಳನ್ನು ನೀಡಿದ್ದೇನೆ’ ಎಂದು ತಿಳಿಸಿದರು.
ಲೋಕಾಯುಕ್ತ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.