ADVERTISEMENT

ನಿವೃತ್ತ ಅಧಿಕಾರಿಗೆ 4 ವರ್ಷ ಜೈಲು; ₹3 ಕೋಟಿ ದಂಡ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 19:16 IST
Last Updated 20 ಜೂನ್ 2018, 19:16 IST

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ‘ಕರ್ನಾಟಕ ಸೋಪ್ಸ್‌ ಮತ್ತು ಡಿಟರ್ಜೆಂಟ್‌’ ನಿವೃತ್ತ ಪ್ರಧಾನ ವ್ಯವಸ್ಥಾಪಕ ಜಿ.ಎಸ್‌. ಭಟ್‌ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೋಮವಾರ ನಾಲ್ಕು ವರ್ಷ ಜೈಲು ಹಾಗೂ ₹ 3 ಕೋಟಿ ದಂಡ ವಿಧಿಸಿದೆ.

ಲೋಕಾಯುಕ್ತ ಪೊಲೀಸರು ಜಿ.ಎಸ್‌. ಭಟ್‌ ಅವರ ಮನೆಯ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ 14 ವರ್ಷಗಳ ಬಳಿಕ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಅಪರಾಧಿ ದಂಡ ಪಾವತಿಸಲು ವಿಫಲರಾದರೆ ಇನ್ನೂ 18 ತಿಂಗಳು ಹೆಚ್ಚುವರಿ
ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶ ಸಚಿನ್‌ ಕೌಶಿಕ್‌ ಆದೇಶಿಸಿದ್ದಾರೆ.

ಭಟ್‌ ಅವರು ತಮ್ಮ ಆದಾಯ ಮೀರಿ ₹ 1.60 ಕೋಟಿ ಮೊತ್ತದ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಇದು ಅವರ ಆದಾಯಕ್ಕಿಂತ ಶೇ 123ರಷ್ಟು ಅಧಿಕ. ನ್ಯಾಯಾಲಯ ವಿಧಿಸಿರುವ ದಂಡ ಹೆಚ್ಚುಕಡಿಮೆ ಎರಡು ಪಟ್ಟು ಅಧಿಕ. ಲೋಕಾಯುಕ್ತ ಪೊಲೀಸರು, ಭಟ್‌ ಅವರ ವಿಜಯನಗರದ ಮನೆಯ ಮೇಲೆ 2004ರಲ್ಲಿ ದಾಳಿ ನಡೆಸಿದ್ದರು. ಐದು ವರ್ಷದ ಬಳಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಭಟ್‌ ವಿರುದ್ಧದ ಆರೋಪ ಸಾಬೀತಾಗಿದ್ದರಿಂದ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಎಂದು ವಿಶೇಷ ‍ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮೋಹನ್‌ ಟಂಕಸಾಲೆ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾದ ಭಟ್‌ ಮೂಲತಃ ಚಾರ್ಟೆಡ್‌ ಅಕೌಂಟೆಂಟ್‌. ಅಕೌಂಟ್ಸ್‌ ಅಧಿಕಾರಿಯಾಗಿ ಕೆಎಸ್‌ಡಿಎಲ್‌ಗೆ ಸೇರಿದ್ದ ಅವರು ಪ್ರಧಾನ ವ್ಯವಸ್ಥಾಪಕರ ಹುದ್ದೆವರೆಗೂ ಬಡ್ತಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.