ಬೆಂಗಳೂರು: ನ್ಯಾಯಬೆಲೆ ಅಂಗಡಿ ಪರವಾನಗಿಯ ವರ್ಗಾವಣೆ ಆದೇಶ ನೀಡಲು ₹ 2.5 ಲಕ್ಷ ಲಂಚ ಪಡೆದ ಆರೋಪದ ಮೇಲೆ ನಗರದ ಬನಶಂಕರಿಯ ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸೊಸೈಟಿಯ (ಟಿಎಪಿಸಿಎಂಎಸ್) ಕಾರ್ಯದರ್ಶಿ ಉಮೇಶ್ ಹಾಗೂ ಉತ್ತರಹಳ್ಳಿ ಮತ್ತು ಕೆಂಗೇರಿ ಹೋಬಳಿ ಆಹಾರ ನಿರೀಕ್ಷಕ ಶ್ರೀಧರ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಅಬ್ದುಲ್ ಮನ್ನಾನ್ ಹೆಸರಿನಲ್ಲಿ ನ್ಯಾಯಬೆಲೆ ಅಂಗಡಿ ಇದೆ. ಅವರು ಹೃದ್ರೋಗಿಯಾಗಿರುವ ಕಾರಣದಿಂದ ಮಗ ರಫೀಕ್ ಹೆಸರಿಗೆ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಕೂಡ ಅವರ ಬೇಡಿಕೆಯನ್ನು ಮಾನ್ಯ ಮಾಡಿತ್ತು. ನ್ಯಾಯಾಲಯದ ಆದೇಶದಂತೆ ಪರವಾನಗಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಪರವಾನಗಿ ವರ್ಗಾವಣೆಗೆ ₹ 2.5 ಲಕ್ಷ ಲಂಚ ಕೊಡುವಂತೆ ಉಮೇಶ್ ಮತ್ತು ಶ್ರೀಧರ್ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ ₹ 1 ಲಕ್ಷ ಪಡೆದಿದ್ದರು. ಬಾಕಿ ಮೊತ್ತವನ್ನು ಉಮೇಶ್ ಬಳಿ ತಲುಪಿಸುವಂತೆ ಶ್ರೀಧರ್ ಸೂಚಿಸಿದ್ದರು. ಈ ಕುರಿತು ಅಬ್ದುಲ್ ಮನಾನ್ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ನೀಡಿದ್ದರು.
ರಫೀಕ್ ಅವರು ಬನಶಂಕರಿ ಟಿಎಪಿಸಿಎಂಸ್ ಕಚೇರಿಗೆ ಸೋಮವಾರ ಸಂಜೆ ತೆರಳಿ, ಶ್ರೀಧರ್ ಸೂಚನೆಯಂತೆ ಉಮೇಶ್ ಅವರಿಗೆ ₹ 1.5 ಲಕ್ಷ ತಲುಪಿಸಿದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು, ಇಬ್ಬರನ್ನೂ ಬಂಧಿಸಿದರು ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕದ ಎಸ್‌ಪಿ–1 ಶ್ರೀನಾಥ್ ಜೋಶಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ಮಂಜು ಬಿ.ಪಿ., ಆನಂದ್ ಎಚ್.ಎಂ., ಕೇಶವ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಡಿವೈಎಸ್‌ಪಿಗಳಾದ ಪ್ರದೀಪ್ ಮತ್ತು ಬಸವರಾಜ್ ಮಗ್ದುಂ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.