ಬೆಂಗಳೂರು: ಸ್ವಜನಪಕ್ಷಪಾತ, ಭ್ರಷ್ಟಾಚಾರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 12 ಕಚೇರಿಗಳ ಮೇಲೆ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದರು.
ಲೋಕಾಯುಕ್ತ ಬಿ.ಎಸ್.ಪಾಟೀಲ ಅವರ ಸೂಚನೆ ಮೇರೆಗೆ ನ್ಯಾಯಾಂಗ ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ 12 ತಂಡಗಳು ದಾಳಿ ನಡೆಸಿ ಮಧ್ಯರಾತ್ರಿವರೆಗೂ ದಾಖಲೆಗಳ ಸಂಗ್ರಹದಲ್ಲಿ ತೊಡಗಿದ್ದವು.
‘ದೂರಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡು ಯಾವ ಕಚೇರಿಯಲ್ಲಿ ಏನೆಲ್ಲ ಅಕ್ರಮಗಳು ನಡೆದಿವೆ ಎನ್ನುವ ವಿವರಣೆ ಆಧರಿಸಿ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತದೆ’ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.
ಇಲಾಖೆಯಲ್ಲಿ ಸಿಬ್ಬಂದಿಯ ರಜೆ, ವೇತನ, ಕಾಲಬದ್ದ ವೇತನ, ವಾರ್ಷಿಕ ಬಡ್ತಿ, ಲಂಚಕ್ಕೆ ಬೇಡಿಕೆ, ಅನುಕಂಪದ ನೌಕರಿ, ಹೊಸ ಕಾಲೇಜುಗಳ ನೋಂದಣಿ, ಮಾನ್ಯತೆ ನವೀಕರಣ, ಅನುದಾನ ಮಂಜೂರು ಸೇರಿದಂತೆ ಹಲವು ವಿಷಯಗಳಲ್ಲಿ ಭ್ರಷ್ಟಾಚಾರ, ಕರ್ತವ್ಯ ಲೋಪದ ದೂರುಗಳು ಕೇಳಿ ಬಂದ ನಂತರ ಲೋಕಾಯುಕ್ತ ಬಿ.ಎಸ್.ಪಾಟೀಲ ಅವರೇ ಇದನ್ನು ಖಚಿತಪಡಿಸಿಕೊಂಡಿದ್ದರು.
ಆ ನಂತರ ಇಲಾಖೆಯ ಒಬ್ಬ ಜಂಟಿ ನಿರ್ದೇಶಕ, ಇಬ್ಬರು ಉಪನಿರ್ದೇಶಕರು, 9 ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.