
ಬೆಂಗಳೂರು: ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯ ಉತ್ತರಹಳ್ಳಿ ಉಪ ವಿಭಾಗದ ಅರೇಹಳ್ಳಿ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶೆಡ್ ಅನ್ನು ಲೋಕಾಯುಕ್ತದ ನಿರ್ದೇಶನದಂತೆ ಆಯುಕ್ತ ಕೆ.ಎನ್. ರಮೇಶ್ ನೇತೃತ್ವದಲ್ಲಿ ಬುಧವಾರ ತೆರವುಗೊಳಿಸಲಾಗಿದೆ. ₹10 ಕೋಟಿ ಮೌಲ್ಯದ 6 ಸಾವಿರ ಚದರ ಅಡಿ ಜಾಗವನ್ನು ನಗರ ಪಾಲಿಕೆ ಸುಪರ್ದಿಗೆ ಪಡೆಯಲಾಗಿದೆ.
ಉತ್ತರಹಳ್ಳಿ ವಾರ್ಡ್ ವ್ಯಾಪ್ತಿಯ ಸರ್ವೆ ಸಂಖ್ಯೆ 2 , 6/2 ಹಾಗೂ 4ರಲ್ಲಿ 2 ಮತ್ತು 3ನೇ ಮುಖ್ಯರಸ್ತೆ ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿದ್ದ ಬಗ್ಗೆ ಸಾರ್ವಜನಿಕರು ಲೋಕಾಯುಕ್ತರಿಗೆ ದೂರು ನೀಡಿದ್ದರು ಎಂದು ಆಯುಕ್ತರು ತಿಳಿಸಿದ್ದಾರೆ.
ರಸ್ತೆ ಒತ್ತುವರಿದಾರರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಎಂಜಿನಿಯರ್ ಉಪಸ್ಥಿತರಿದ್ದರು.
ಒಆರ್‌ಸಿಸಿಎ ಕಂಪನಿಗಳಿಗೆ ಮನವಿ: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ (ಸಿಎಸ್‌ಆರ್) ಸಮರ್ಪಕ ಬಳಕೆಗಾಗಿ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘಟನೆ (ಒಆರ್‌ಆರ್‌ಸಿಎ) ನಗರ ಪಾಲಿಕೆ ಜೊತೆಗೆ ಕೈಜೋಡಿಸಬೇಕು ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಭಿವೃದ್ಧಿಯ ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಕೋರಿದರು.
ಇಬ್ಲೂರ್ ಜಂಕ್ಷನ್‌ನಿಂದ ಕೆ.ಆರ್. ಪುರದವರಗಿನ ಹೊರವರ್ತುಲ ರಸ್ತೆ ಅಭಿವೃದ್ಧಿ, ಸುಧಾರಣೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಸಿಎಸ್‌ಆರ್ ಸಹಭಾಗಿತ್ವದ ಬಗ್ಗೆ ಲೋಖಂಡೆ ಸ್ನೇಹಲ್ ಸುಧಾಕರ್ ಅಧ್ಯಕ್ಷತೆಯಲ್ಲಿ ಚರ್ಚಿಸಲಾಯಿತು.
ಪಾದಚಾರಿ ಮಾರ್ಗಗಳ ನಿರ್ವಹಣೆ, ಹಸಿರು ಸಸಿಗಳ ನೆಡುವುದು, ಗೋಡೆಯಲ್ಲಿ ಚಿತ್ರಕಲೆ ರಚಿಸುವುದು, ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಚರ್ಚಿಸಲಾಯಿತು. ಏಳು ಪ್ರಮುಖ ಜಂಕ್ಷನ್‌ಗಳ ಸುಧಾರಣೆ ಹಾಗೂ ಮೇಲ್ಸೇತುವೆ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಬಳಸಲು ತಿಳಿಸಲಾಯಿತು.
ವಾಕಲೂರು ಸಂಸ್ಥೆಯಿಂದ ಅರುಣ್ ಪೈ, ಇಂಡಿಯಾ ರೈಸಿಂಗ್ ಸಂಸ್ಥೆಯಿಂದ ಅನಿರುದ್ಧ ಅಭ್ಯಂಕರ್, ಇಂಟೆಲ್ ಕಂಪನಿಯ ಸ್ಯಾಮ್ಯುಯಲ್ ಹಾಗೂ ಕೆಪಿಎಂಜಿ ಕಂಪನಿಯ ವಿಜಯ್ ಪಾಲ್ಗೊಂಡಿದ್ದರು.
ಪಾರ್ಕಿಂಗ್ ಸ್ಥಳ ಗುರುತಿಸಿ: ಮಹೇಶ್ವರ ರಾವ್
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಆದಾಯ ಬರುವಂತೆ ಮಾಡಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಎಲ್‌ಇಡಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಪ್ರಮುಖ ರಸ್ತೆ ವಾರ್ಡ್ ರಸ್ತೆಗಳಲ್ಲಿ ಬಾಕಿಯಿರುವ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ಜಲಮಂಡಳಿ ಕಾಮಗಾರಿ ಪೂರ್ಣಗೊಳಿಸಿರುವ ಕಡೆ ರಸ್ತೆ ಕತ್ತರಿಸಿದ ಭಾಗವನ್ನು ದುರಸ್ತಿಪಡಿಸಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.