ADVERTISEMENT

‘ಹವಾ’ ಕಾರಣಕ್ಕೆ ರೌಡಿಶೀಟರ್ ಕೊಲೆ!

ಒಂಬತ್ತು ಆರೋಪಿಗಳ ಬಂಧನ: ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಿಂದ ಸಿಕ್ಕಿದ ಸುಳಿವು

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 2:40 IST
Last Updated 30 ಜನವರಿ 2020, 2:40 IST
   

ಬೆಂಗಳೂರು: ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕೆಂಗೇರಿ ಠಾಣೆಯ ರೌಡಿಶೀಟರ್ ಮಶಾಣ ಲೋಕೇಶ್‌ನನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದ ಒಂಬತ್ತು ಆರೋಪಿಗಳನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

ಆದರ್ಶನಗರದ ಹೇಮಂತ್ (25), ಇಟ್ಟುಮಡುವಿನ ಸಾಗರ್ (22) ಮತ್ತು ಉದಯ್ ಕಪ್ಪೆ (19), ಜಯನಗರದ ಪ್ರವೀಣ್ ಶೂಟರ್ (22), ಆಜಾದ್‌ನಗರದ ಸಂದೇಶ್ ಚಾರ್ಲಿ (22), ಆರ್.ಆರ್. ನಗರದ ತೇಜಸ್ ಬುಲ್ಲಿ (19), ಕತ್ರಿಗುಪ್ಪೆ ಯಶವಂತ್ (21), ಶ್ರೀನಗರದ ಸಾಗರ್ (19) ಮತ್ತು ಕೆ.ಆರ್. ಪುರದ ರವಿ (23) ಬಂಧಿತರು.

ಜ. 22ರಂದು ರಾತ್ರಿ 10.30ರಲ್ಲಿ ತನ್ನ ಸ್ನೇಹಿತನ ಜತೆ ಆಜಾದ್‌ನಗರದ ರಸ್ತೆಯಲ್ಲಿ ಮಶಾಣ ಲೋಕೇಶ್ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಲೋಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದ.

ADVERTISEMENT

ಪ್ರಕರಣ ದಾಖಲಿಸಿಕೊಂಡಿದ್ದ ಚಾಮರಾಜಪೇಟೆ ಪೊಲೀಸರು, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ
ದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಹೇಮಂತ್‌ನ ಮುಖಚಹರೆ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಕಾಣಿಸಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಬಿ. ರಮೇಶ್ ತಿಳಿಸಿದರು.

ಫೈನಾನ್ಸ್‌ ವ್ಯವಹಾರದಲ್ಲಿ ಮುನಿಸು: ಫೈನಾನ್ಸ್‌ ವ್ಯವಹಾರದಲ್ಲಿ ಲೋಕೇಶ್ ಹಿಡಿತ ಸಾಧಿಸಿದ್ದ. ಲೋಕೇಶ್‌ ಬೆಳೆಯುತ್ತಿರುವುದು ಹೇಮಂತ್‌ಗೆ ಇಷ್ಟವಿರಲಿಲ್ಲ. ಹೀಗಾಗಿ, ಲೋಕೇಶ್ ಜತೆಗಿದ್ದುಕೊಂಡೇ ಹತ್ಯೆಗೆ ತಯಾರಿ ನಡೆಸಿದ್ದ. ನಂತರ ಇಟ್ಟುಮಡುವಿನ ಸಾಗರ್‌ನನ್ನು ಸಂಪರ್ಕಿಸಿ, ‘ಮಶಾಣ ಲೋಕಿ ಹವಾ ಜಾಸ್ತಿಯಾಗಿದೆ. ಅವನನ್ನು ಮುಗಿಸಿದರೆ ನಮ್ಮ ಹವಾ ಬೆಳೆಯುತ್ತದೆ. ರೌಡಿ ಫೀಲ್ಡ್‌ನಲ್ಲಿ ಹೆಸರು ಮಾಡಬಹುದು’ ಎಂದು ಕೃತ್ಯಕ್ಕೆ ಹುರಿದುಂಬಿಸಿದ್ದ ಎಂದೂ ಡಿಸಿಪಿ ಹೇಳಿದರು.

ಡಿಸೆಂಬರ್‌ನಿಂದಲೇ ಆರೋಪಿಗಳು ಲೋಕೇಶ್ ಕೊಲೆಗೆ ಸಂಚು ರೂಪಿಸಿದ್ದರು. ಈ ಉದ್ದೇಶದಿಂದ ಆರೋಪಿ ಇಟ್ಟುಮಡುವಿನ ಸಾಗರ್, ತನ್ನ ಸಹಚರರ ಜೊತೆಗೆ ಚರ್ಚೆ ಮಾಡಿದ್ದ. ಬಿಡಿಎ ಲೇಔಟ್‌ನಲ್ಲಿರುವ ಲೋಕೇಶನ ಮನೆ, ವ್ಯವಹಾರ ಮತ್ತು ಓಡಾಡುವ ಸಮಯದ ಬಗ್ಗೆ ಹೇಮಂತ್‌ ತಿಳಿದುಕೊಂಡಿದ್ದ. ಅಲ್ಲದೆ, ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ತನ್ನ ಸ್ನೇಹಿತರೆಂದು ಲೋಕೇಶ್‌ಗೆ ಪರಿಚಯಿಸಿದ್ದ.

ಜ.22ರಂದು ರಾತ್ರಿ ಆಜಾದ್‌ನಗರದಲ್ಲಿರುವ ಸ್ನೇಹಿತನ ಮನೆಗೆ ಲೋಕೇಶ್ ಬಂದಿದ್ದ ಮಾಹಿತಿ ಹೇಮಂತ್‌ಗೆ ಸಿಕ್ಕಿತ್ತು. ಲೋಕೇಶ್‌ ಅಲ್ಲಿಂದ ವಾಪಸು ಹೋಗುತ್ತಿದ್ದಾಗ ಆರೋಪಿಗಳ ಪೈಕಿ, ಸಂದೇಶ ಚಾರ್ಲಿ, ಸ್ಕೂಟರ್ ತಡೆದು ಆತನನ್ನು ಮಾತನಾಡಿಸಿದ್ದ. ಈ ವೇಳೆ, ಮಾರಕಾಸ್ತ್ರಗಳ ಸಹಿತ ಬೈಕ್‌ನಲ್ಲಿ ಬಂದ ಆರೋಪಿಗಳು, ಲೋಕೇಶ್‌ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.