ADVERTISEMENT

ವಾರಾಂತ್ಯದಲ್ಲಿ ದೂರದ ಪ್ರಯಾಣ ದರ ದುಪ್ಪಟ್ಟು

ಹೊರೆಯಾದ ಖಾಸಗಿ ಬಸ್‌ ಪ್ರಯಾಣ: ಕ್ರಮಕ್ಕೆ ಪ್ರಯಾಣಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 20:13 IST
Last Updated 13 ಮಾರ್ಚ್ 2022, 20:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ ಮೂರನೇ ಅಲೆ ಬಳಿಕ ಎಲ್ಲ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರುಳುತ್ತಿದ್ದಂತೆ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ಮನ ಬಂದಂತೆ ಹೆಚ್ಚಿಸುತ್ತಿವೆ.

ವಾರಾಂತ್ಯದಲ್ಲಿ ದುಪ್ಪಟ್ಟು ಪ್ರಯಾಣ ದರವನ್ನು ಹೆಚ್ಚಿಸುವುದು ಸಾಮಾನ್ಯವಾಗಿದೆ. ಉದಾಹರಣೆಗೆ ಬೆಂಗಳೂರಿನಿಂದ ಶಿರಸಿಗೆ ಸಾಮಾನ್ಯ ದಿನಗಳಲ್ಲಿ ₹ 595 ಇದ್ದರೆ, ವಾರಾಂತ್ಯಗಳಲ್ಲಿ ₹ 1020 ಪಡೆಯಲಾಗುತ್ತಿದೆ. ಹಬ್ಬದ ದಿನಗಳಿಗೆ ಮುನ್ನ ಈ ರೀತಿ ದುಪ್ಪಟ್ಟು ಮತ್ತು ಮೂರು ಪಟ್ಟು ಹೆಚ್ಚಿಸುವುದು ಇದುವರೆಗೆ ಸಾಮಾನ್ಯವಾಗಿತ್ತು. ಆದರೆ, ಈಗ ಪ್ರತಿ ವಾರವೂ ತಮಗೆ ತಿಳಿದಂತೆ ಹೆಚ್ಚಿಸುತ್ತಿವೆ. ಇಲ್ಲಿ ಯಾವುದೇ ರೀತಿಯ ನಿಯಂತ್ರಣವೇ ಇಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.

ಉಳಿದ ದಿನಗಳಲ್ಲೂ ಕೆಲವು ಮಾರ್ಗಗಳಲ್ಲಿ ₹ 150ರಿಂದ ₹ 400 ಹೆಚ್ಚಿಸಲಾಗುತ್ತಿದೆ. ಒತ್ತಡ ಇಲ್ಲದ ಕೆಲವು ಮಾರ್ಗಗಳಲ್ಲಿ ಪ್ರಯಾಣಿಕರನ್ನು ಆಕರ್ಷಿಸಲು ಮೂಲ ದರಕ್ಕಿಂತಲೂ ₹100ರಿಂದ ₹200ರವರೆಗೆ ವಿನಾಯಿತಿ ನೀಡುತ್ತಿರುವ ಉದಾಹರಣೆಗಳಿವೆ.

ADVERTISEMENT

ಜತೆಗೆ, ಕೆಲವು ಮಾರ್ಗಗಳಲ್ಲಿ ಬಸ್‌ಗಳ ಸಂಖ್ಯೆಯನ್ನು ಖಾಸಗಿ ಕಂಪನಿಗಳು ಕಡಿಮೆ ಮಾಡಿವೆ. ಖಾಸಗಿ ಬಸ್‌ಗಳ ಪ್ರಯಾಣ ದರಗಳ ಮೇಲೆ ಸಾರಿಗೆ ಇಲಾಖೆ ನಿರಂತರವಾಗಿ ನಿಗಾವಹಿಸಬೇಕು. ವಾರಾಂತ್ಯಗಳಲ್ಲಿ ಊರಿಗೆ ತೆರಳುವುದೇ ಕಷ್ಟವಾಗುತ್ತಿದೆ’ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

‘ಕೋವಿಡ್‌ನಿಂದ ಖಾಸಗಿ ಬಸ್‌ಗಳ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಕೆಲವರು ಬಸ್‌ಗಳನ್ನು ಮಾರಿದ್ದಾರೆ. ಹೀಗಾಗಿ, ಬೇಡಿಕೆಗೆ ತಕ್ಕಂತೆ ಮತ್ತು ಪ್ರಯಾಣಿಕರ ಒತ್ತಡ ಹೆಚ್ಚಾದಾಗ ದರ ಗಳನ್ನು ಹೆಚ್ಚಿಸಲಾಗುತ್ತಿದೆ. ಹಲವು ದಿನಗಳ ದರಗಳನ್ನು ಸಹ ಕಡಿಮೆ ಮಾಡಲಾಗುತ್ತಿದೆ’ ಎಂದು ಖಾಸಗಿ ಬಸ್‌ಗಳ ಕಂಪನಿಯೊಂದರ ವ್ಯವಸ್ಥಾಪಕರೊಬ್ಬರು ತಿಳಿಸಿದರು. ಪ್ರಯಾಣ ದರ ಹೆಚ್ಚಳದ ಬಗ್ಗೆ ಅಧಿಕಾರಿಗಳ ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

‘ಕೆಲವರು ದರ ಹೆಚ್ಚಿಸಿರಬಹುದು’
‘ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ವಾರಾಂತ್ಯದಲ್ಲಿ ಶೇ 10ರಿಂದ 20ರಷ್ಟು ಹೆಚ್ಚಿಸಲಾಗುತ್ತಿದೆ. ಕೆಲವರು ಮಾತ್ರ ಇದಕ್ಕಿಂತಲೂ ಹೆಚ್ಚಿಸಿರಬಹುದು. ಆದರೆ, ಇದು ನಮ್ಮ ಗಮನಕ್ಕೆ ಬಂದಿಲ್ಲ’ ಎಂದು ಕರ್ನಾಟಕ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ ತಿಳಿಸಿದರು.

‘ಸಾಮಾನ್ಯ ದಿನಗಳಲ್ಲಿ ಪ್ರಯಾಣ ದರಗಳು ಹಿಂದಿನಂತೆ ಯಥಾಸ್ಥಿತಿಯಲ್ಲಿವೆ. ಪ್ರಯಾಣ ದರವನ್ನು ಹೆಚ್ಚಿಸಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.