ADVERTISEMENT

ಬಟ್ಟೆ ವ್ಯವಹಾರದಲ್ಲಿ ನಷ್ಟ: ಮಳಿಗೆಯಲ್ಲಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 23 ಮೇ 2022, 18:34 IST
Last Updated 23 ಮೇ 2022, 18:34 IST
   

ಬೆಂಗಳೂರು: ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿರುವ ಬೆಳ್ಳಿ ಮಾರಾಟ ಮಳಿಗೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ರಾಹುಲ್ ಜೈನ್, ರಾಜೇಶ್ ಹಾಗೂ ಮಧು ಬಂಧಿತರು. ಇವರಿಂದ ₹ 9 ಲಕ್ಷ ಮೌಲ್ಯದ 8 ಕೆ.ಜಿ ಬೆಳ್ಳಿ ಬಿಸ್ಕತ್‌ಗಳು, ಬೆಳ್ಳಿ ಸಾಮಗ್ರಿ ಹಾಗೂ ₹ 3.38 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಉತ್ತಮ್ ಜೈನ್ ಮಾಲೀಕತ್ವದ ಮಳಿಗೆಯಲ್ಲಿ ಆರೋಪಿ ರಾಹುಲ್ ಅರೆಕಾಲಿಕ ಕೆಲಸಕ್ಕೆ ಸೇರಿದ್ದ. ಜೊತೆಗೆ, ಪ್ರತ್ಯೇಕವಾಗಿ ಬಟ್ಟೆ ವ್ಯವಹಾರ ಸಹ ಮಾಡುತ್ತಿದ್ದ. ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಆರ್ಥಿಕ ತೊಂದರೆಗೆ ಸಿಲುಕಿದ್ದ. ಹೀಗಾಗಿ, ಕೆಲಸಗಾರರ ಜೊತೆ ಸೇರಿ ಕಳ್ಳತನ ಮಾಡಿದ್ದ’ ಎಂದೂ ತಿಳಿಸಿದರು.

ADVERTISEMENT

ಕ್ಯಾಮೆರಾದಲ್ಲಿ ಸೆರೆ: ‘ಉತ್ತಮ್ ಜೈನ್ ಅವರು ಮೇ 21ರಂದು ರಾತ್ರಿ ಮಳಿಗೆಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಮಾಸ್ಕ್ ಹಾಗೂ ಹೆಲ್ಮೆಟ್ ಹಾಕಿಕೊಂಡು ತಡರಾತ್ರಿ ಮಳಿಗೆಗೆ ಬಂದಿದ್ದ ಆರೋಪಿಗಳು, ಬೀಗ ಮುರಿದು ಒಳನುಗ್ಗಿ ಬೆಳ್ಳಿ ಸಾಮಗ್ರಿಗಳನ್ನು ಕದ್ದುಕೊಂಡು ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಮರುದಿನ ಬೆಳಿಗ್ಗೆ ಉತ್ತಮ್, ಅಂಗಡಿಗೆ ಬಂದಿದಾಗ ಕಳ್ಳತನ ಗಮನಕ್ಕೆ ಬಂದಿತ್ತು. ಠಾಣೆಗೆ ದೂರು ನೀಡಿದ್ದರು. ಅಂಗಡಿಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ, ರಾಹುಲ್ ಸುಳಿವು ಸಿಕ್ಕಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.