ADVERTISEMENT

ಪ್ರೇಮ ವೈಫಲ್ಯ: ಮೇಲ್ಸೇತುವೆಯಿಂದ ಜಿಗಿದು ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 16:01 IST
Last Updated 9 ಜೂನ್ 2025, 16:01 IST
<div class="paragraphs"><p>ಸಾವು&nbsp;(ಪ್ರಾತಿನಿಧಿಕ ಚಿತ್ರ)</p></div>

ಸಾವು (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದ ಮೇಲ್ಸೇತುವೆಯಿಂದ ಜಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೆಬ್ಬಾಳದ ಶಿವಶಂಕರ ಲೇಔಟ್ ನಿವಾಸಿ ಮುನಿರಾಜು (29) ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ.

ADVERTISEMENT

‘ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದ ಮುನಿರಾಜು ಅವರು, ಕೆಲವು ತಿಂಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ದೂರವಾಗಿದ್ದರು. ಈ ನಡುವೆ ಯುವತಿ ಬೇರೊಬ್ಬ ಯುವಕನನ್ನು ಪ್ರೀತಿಸಲು ಆರಂಭಿಸಿದ್ದರು. ಯುವಕನ ಜೊತೆಗಿರುವ ಫೋಟೊವನ್ನು ವಾಟ್ಸ್‌ಆ್ಯಪ್‌ನ ಸ್ಟೇಟಸ್‌ನಲ್ಲಿ ಯುವತಿ ಹಾಕಿಕೊಂಡಿದ್ದರು. ಅದನ್ನು ಗಮನಿಸಿದ್ದ ಮುನಿರಾಜು ಅವರು ಬೇಸರ ಮಾಡಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಮುನಿರಾಜು ಅವರು ಭಾನುವಾರ ರಾತ್ರಿ 11.15ರ ಸುಮಾರಿಗೆ ಮಾಜಿ ಪ್ರೇಯಸಿಗೆ ಕೊನೆಯ ಬಾರಿಗೆ ಕರೆ ಮಾಡಿ ಮಾತನಾಡಿದ್ದರು. ನನ್ನಿಂದ ದೂರವಾಗ ಬೇಡ ಎಂದು ಮನವಿ ಮಾಡಿದ್ದರು. ಆಕೆ ಕರೆ ಕಡಿತ ಮಾಡಿದ್ದರು. ನಂತರ, ಮುನಿರಾಜು ಅವರು ಕೆಐಎಎಲ್ ರಸ್ತೆಗೆ ಬಂದು ಮೇಲ್ಸೇತುವೆಯಲ್ಲಿ ಬೈಕ್ ನಿಲ್ಲಿಸಿ, ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲ್ಸೇತುವೆ ಕೆಳಗಿನ ಮಾಲ್ ಆಫ್ ಏಷ್ಯಾದ ಎದುರು ಮೃತದೇಹ ಪತ್ತೆಯಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇಮ ವೈಫಲ್ಯವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮುನಿರಾಜು ಅವರ ತಂದೆ ದೂರು ನೀಡಿದ್ದಾರೆ. ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.