ADVERTISEMENT

ಕೆ–ರೈಡ್‌ ವಿರುದ್ಧ ಎಲ್‌ ಆ್ಯಂಡ್‌ ಟಿ ಸಲ್ಲಿಸಿದ್ದ ಅರ್ಜಿ ವಜಾ

ಉಪನಗರ ರೈಲು ಯೋಜನೆಯಿಂದ ಹಿಂದೆ ಸರಿದ ಬಳಿಕ ಬ್ಯಾಂಕ್‌ ಗ್ಯಾರಂಟಿ ನಗದೀಕರಿಸದಂತೆ ಕೋರಿದ್ದ ಎಲ್‌ ಆ್ಯಂಡ್‌ ಟಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 23:35 IST
Last Updated 9 ಜನವರಿ 2026, 23:35 IST
ಉಪನಗರ ರೈಲು
ಉಪನಗರ ರೈಲು   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ ಕಾಮಗಾರಿಯನ್ನು (ಬಿಎಸ್‌ಆರ್‌ಪಿ) ಸ್ಥಗಿತಗೊಳಿಸಿದ್ದ ಎಲ್‌ ಆ್ಯಂಡ್ ಟಿ  ಗುತ್ತಿಗೆ ಕಂಪನಿಯು ಬ್ಯಾಂಕ್‌ ಗ್ಯಾರಂಟಿಗೆ ಸಂಬಂಧಿಸಿದಂತೆ ಕೆ–ರೈಡ್‌ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಾಣಿಜ್ಯ ನ್ಯಾಯಾಲಯವು ವಜಾ ಮಾಡಿದೆ. 

ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ನಡುವಿನ ಕಾರಿಡಾರ್‌–2 ಕಾಮಗಾರಿಯ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ಕಂಪನಿ ಪಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಎಸ್‌ಆರ್‌ಪಿ ಜಾರಿಯ ಜವಾಬ್ದಾರಿ ಹೊತ್ತಿದ್ದ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸರ್ಸ್‌ (ಕೆ- ರೈಡ್) ಜೊತೆಗೆ 2023ರ ಜೂನ್‌ 16ರಂದು ಒಪ್ಪಂದ ಮಾಡಿಕೊಂಡಿತ್ತು. 

ಆರಂಭದಲ್ಲಿ ₹ 905.50 ಕೋಟಿಯ ಈ ಯೋಜನೆಯನ್ನು ಗುತ್ತಿಗೆ ಪಡೆಯಲು ಎಲ್ ಆ್ಯಂಡ್‌ ಟಿ ಕಂಪನಿಯು ₹ 80.53 ಕೋಟಿ ಬ್ಯಾಂಕ್‌ ಗ್ಯಾರಂಟಿ ನೀಡಿತ್ತು. ಷರತ್ತುಗಳನ್ನು ಪೂರೈಸದೇ ಇದ್ದ ಪಕ್ಷದಲ್ಲಿ ಬ್ಯಾಂಕ್‌ ಗ್ಯಾರಂಟಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವು ಗುತ್ತಿಗೆ ನೀಡಿದ ಸಂಸ್ಥೆಗೆ ಇರುತ್ತದೆ.

ADVERTISEMENT

ಜಮೀನು ಹಸ್ತಾಂತರ ಪ್ರಕ್ರಿಯೆಯನ್ನೇ ಸಂಪೂರ್ಣ ಮಾಡಿಲ್ಲ. ಒತ್ತುವರಿ ಮಾಡಿಕೊಂಡವರು, ಖಾಸಗಿ ಜಮೀನಿನ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹಸ್ತಾಂತರವಾಗಿರುವ ಜಮೀನಲ್ಲಷ್ಟೇ ಕೆಲಸ ಮಾಡಿ, ಮಧ್ಯೆ ಮಧ್ಯೆ ಹಾಗೇ ಬಿಡಬೇಕಿದ್ದರೆ ಕಾಮಗಾರಿ ಪೂರ್ಣಗೊಳಿಸುವುದು ಹೇಗೆ ಎಂದು ಪ್ರಶ್ನಿಸಿ 2025ರಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿಯ ಗುತ್ತಿಗೆಯಿಂದ ಹಿಂದೆ ಸರಿದಿತ್ತು. ಹೀಗಾಗಿ ಕಾಮಗಾರಿ ಸ್ಥಗಿತವಾಗಿತ್ತು.

ಕಾರಿಡಾರ್‌–2ಕ್ಕೆ ಸಂಬಂಧಿಸಿದಂತೆ ಶೇ 84ರಷ್ಟು ಜಮೀನು ನೀಡಲಾಗಿದೆ. ಕಾರಿಡಾರ್‌–4ಕ್ಕೆ ಸಂಬಂಧಿಸಿದಂತೆ 17 ಕಿ.ಮೀ. ಕಾಮಗಾರಿ ನಡೆಸಲು ಅವಕಾಶವಿತ್ತು. ಶೇ 20ರಷ್ಟು ಪ್ರಗತಿಯನ್ನೂ ಸಾಧಿಸಿಲ್ಲ. ಕಾಮಗಾರಿ ನಡೆಸದೇ ಗುತ್ತಿಗೆಯಿಂದ ಹಿಂದೆ ಸರಿದಿರುವುದು ಒಪ್ಪಂದದ ಉಲ್ಲಂಘನೆಯಾಗಿದೆ. ಒಪ್ಪಂದ ಪ್ರಕಾರ ಎಲ್ ಆ್ಯಂಡ್‌ ಟಿಗೆ ಒಪ್ಪಂದ ರದ್ದುಗೊಳಿಸಿ ಕಾಮಗಾರಿ ರದ್ದುಗೊಳಿಸುವ ಅಧಿಕಾರವಿಲ್ಲ ಎಂದು ಕೆ–ರೈಡ್‌ ಹೇಳಿತ್ತು. ಕೆ–ರೈಡ್‌ ಬ್ಯಾಂಕ್‌ ಗ್ಯಾರಂಟಿಯನ್ನು ನಗದೀಕರಿಸದಂತೆ ತಡೆಯಾಜ್ಞೆ ನೀಡಬೇಕು ಎಂದು ಎಲ್‌ ಆ್ಯಂಡ್‌ ಟಿ ಕಂಪನಿಯು ನಗರ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ (ವಾಣಿಜ್ಯ) ಅರ್ಜಿ ಸಲ್ಲಿಸಿತ್ತು.

ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಅರ್ಜಿಯನ್ನು ವಜಾ ಮಾಡಿದೆ. ಅರ್ಜಿದಾರರಿಗೆ ನ್ಯಾಯಮಂಡಳಿಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡುವ ಸ್ವಾತಂತ್ರ್ಯ ಇದೆ ಎಂದು ಆದೇಶದಲ್ಲಿ ತಿಳಿಸಿದೆ. ಈ ಹಿಂದೆ ನೀಡಲಾದ ಮಧ್ಯಂತರ ಆದೇಶಗಳು ಇದರೊಂದಿಗೆ ರದ್ದಾಗಲಿವೆ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.