ADVERTISEMENT

ಎಸ್‌ಟಿಪಿ ದುರಂತ ಬಂಧಿತರಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 20:01 IST
Last Updated 18 ಜೂನ್ 2019, 20:01 IST

ಬೆಂಗಳೂರು: ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್‌ನಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ (ಎಸ್‌ಟಿಪಿ) ಚಾವಣಿಯ ಕಾಂಕ್ರೀಟ್‌ ಕಾಮಗಾರಿ ವೇಳೆ ಸೆಂಟ್ರಿಂಗ್‌ ಕುಸಿದು ಮೂವರು ಸಾವಿಗೀಡಾದ ಘಟನೆಯಲ್ಲಿ ಬಂಧಿತರಾಗಿದ್ದ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

‘ಎನ್ವಿರೋ ಕಂಟ್ರೋಲ್ ಅಸೋಸಿಯೇಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌’ನ ಗುತ್ತಿಗೆದಾರ ಸುರೇಂದ್ರ, ಎಸ್‌ಎಂಸಿ ಇನ್ಫಾಸ್ಟ್ರಕ್ಚರ್ ಕಂಪನಿಯ ಮೇಲ್ವಿಚಾರಕ ಭರತ್, ಎಂಜಿನಿಯರ್ ಕಾರ್ತಿಕ್, ಮೆಕಾನಿಕಲ್ ಎಂಜಿನಿಯರ್ ಗೌರವ್, ಜಲಮಂಡಳಿಯ ಸಹಾಯಕ ಎಂಜಿನಿಯರ್‌ಗಳಾದ ಮಹಮದ್ ಹನೀಫ್ ಮತ್ತು ಭಾಗ್ಯಲಕ್ಷ್ಮಿ ಎಂಬವರ ವಿರುದ್ಧ ಕರ್ತವ್ಯದಲ್ಲಿ ನಿರ್ಲಕ್ಷ್ಯ ಆರೋಪದಡಿ ಅಮೃತಹಳ್ಳಿ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡು, ಬಂಧಿಸಿದ್ದರು.

‘ಸೆಂಟ್ರಿಂಗ್ ಸರಿಯಾಗಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಅನಾಹುತ ಸಂಭವಿಸದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿದ್ದರೂ ಸೆಂಟ್ರಿಂಗ್ ಕುಸಿದು ದುರ್ಘಟನೆ ನಡೆದಿದೆ ಎಂದು ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ತಿಳಿಸಿದ್ದಾರೆ’ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದರು.

ADVERTISEMENT

ಮೃತದೇಹ ಹಸ್ತಾಂತರ: ಘಟನೆಯಲ್ಲಿ ಮೃತಪಟ್ಟ ಸೈಟ್ ಎಂಜಿನಿಯರ್, ದಾವಣಗೆರೆಯ ಕೃಷ್ಣ ಯಾದವ್ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

‘ಮೃತಪಟ್ಟ ಮತ್ತೊಬ್ಬ ಸೈಟ್ ಎಂಜಿನಿಯರ್ ಪ್ರಭು ರಾಮ್ ಅವರ ತಾಯಿ ಅಮೆರಿಕದಲ್ಲಿದ್ದು, ಅವರು ಬಂದ ಬಳಿಕ ಶವವನ್ನು ಹಸ್ತಾಂತರಿಸಲಾಗುವುದು. ಮೃತ ಮೇಲ್ವಿಚಾರಕ ಸುಮಂತ್‌ಕರ್ ಪಾಲಕರು ಪಶ್ಚಿಮ ಬಂಗಾಳದಲ್ಲಿದ್ದಾರೆ. ಅವರೂ ನಗರಕ್ಕೆ ಬರುತ್ತಿದ್ದಾರೆ’ ಎಂದು ಅಮೃತಹಳ್ಳಿ ಪೊಲೀಸರು ತಿಳಿಸಿದರು.

ಘಟನೆಯಲ್ಲಿ ಗಾಯಗೊಂಡು ಆಸ್ಟರ್ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ಮಂದಿಯ ಪೈಕಿ, ಕೆಲವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಸಣ್ಣ-ಪುಟ್ಟ ಗಾಯಗೊಂಡವರನ್ನು ಬಿಡುಗಡೆ ಮಾಡಲಾಗಿದೆ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.