ಬೆಂಗಳೂರು: ಒಮನ್‌ನ ಪೊಲೀಸ್ ಅಧಿಕಾರಿಗೆ ಎಡ ಹೃತ್ಕುಕ್ಷಿ ಸಹಾಯಕ ಸಾಧನವನ್ನು (ಲೆಫ್ಟ್ ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸ್) ನಗರದ ನಾರಾಯಣ ಹೆಲ್ತ್ ಸಿಟಿಯ ವೈದ್ಯರು ಯಶಸ್ವಿಯಾಗಿ ಅಳವಡಿಸಿದ್ದಾರೆ.
ಒಮನ್‌ನ ಮಸ್ಕತ್ ನಗರದ ಪೊಲೀಸ್ ಅಧಿಕಾರಿ ವಲೀದ್ ಇಸ್ಸಾ ಅಲ್ಪಲುಶಿ ಅವರು ಪದೇಪದೇ ತೀವ್ರ ಹೃದಯ ವೈಫಲ್ಯ ಸಮಸ್ಯೆ ಎದುರಿಸುತ್ತಿದ್ದರು. ಚಿಕಿತ್ಸೆಗಾಗಿ ಅವರು ನಗರದ ಆಸ್ಪತ್ರೆಗೆ ದಾಖಲಾದರು. ಅವರ ಹೃದಯದ ಎಡ ಹೃತ್ಕುಕ್ಷಿ ಶೇ 15ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು. ಆರೋಗ್ಯವಂತರಲ್ಲಿ ಇದರ ಕಾರ್ಯ ನಿರ್ವಹಣೆ ಶೇ 55ರಷ್ಟು ಇರುತ್ತದೆ. ಅವರಿಗೆ ಹೃದಯ ಕಸಿ ಮಾಡುವುದೂ ಅಸಾಧ್ಯವಾಗಿತ್ತು. ಕೊನೆಗೆ ಅವರಿಗೆ ಎಲ್‌ವಿಎಡಿ ಸಾಧನವನ್ನು ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಲಾಯಿತು.
ಏನಿದು ಸಾಧನ?: ಎಲ್‌ವಿಎಡಿ ಬ್ಯಾಟರಿ ಚಾಲಿತ ಪಂಪಿಂಗ್ ಸಾಧನ. ವಿಫಲವಾದ ಎಡ ಹೃತ್ಕುಕ್ಷಿಯನ್ನು ಇದು ಮಹಾ ಅಪಧಮನಿಗೆ ಸಂಪರ್ಕಿಸುತ್ತದೆ. ಬಲಭಾಗದ ಹೃತ್ಕುಕ್ಷಿಯು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಈ ಸಾಧನದ ಅಳವಡಿಕೆ ಯಶಸ್ವಿಯಾಗುತ್ತದೆ.
‘ಹೃದಯ ಕಸಿ ಅಸಾಧ್ಯವೆನಿಸಿದ ರೋಗಿಗಳಿಗೆ ಇದು ಜೀವರಕ್ಷಕ ಸಾಧನ. ಇದನ್ನು ಅಳವಡಿಸುವ ಪ್ರಕ್ರಿಯೆ ಅತ್ಯಂತ ಸಂಕೀರ್ಣವಾದುದು’ ಎಂದು ನಾರಾಯಣ ಹೆಲ್ತ್ ಸಿಟಿಯ ಹೃದಯ ಕಸಿ ಯೋಜನೆಯ ನಿರ್ದೇಶಕ ಡಾ. ಭಗೀರಥ ರಘುರಾಮನ್ ತಿಳಿಸಿದರು.
ಎಲ್‌ವಿಎಡಿಯ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 11 ಗಂಟೆವರೆಗೆ ಕಾರ್ಯ ನಿರ್ವಹಿಸಬಲ್ಲದು. ತಾಂತ್ರಿಕವಾಗಿ ಅತ್ಯುನ್ನತ ದರ್ಜೆಯ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇದೊಂದು ವಿಶ್ವಾಸಾರ್ಹ ಶಸ್ತ್ರಚಿಕಿತ್ಸೆ ಎಂದು ಹೃದಯಕಸಿ ಶಸ್ತ್ರಚಿಕಿತ್ಸಕ ಡಾ. ವರುಣ್ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.