ADVERTISEMENT

ಮಾಸ್ತಿ ಭವನ: ಅಗತ್ಯವಿದ್ದರೆ ಮತ್ತಷ್ಟು ಅನುದಾನ- ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 11:22 IST
Last Updated 18 ಏಪ್ರಿಲ್ 2022, 11:22 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಭವನ ನಿರ್ಮಾಣಕ್ಕೆ ಸುಮಾರು ₹3.5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಟ್ರಸ್ಟ್‌ ವತಿಯಿಂದ ಜ್ಞಾನಜ್ಯೋತಿ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾಸ್ತಿ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಸೋಮವಾರ ಮಾತನಾಡಿದರು.

‘ಮಾಸ್ತಿಯವರ ಆಶಯದಂತೆ ಸಾಹಿತ್ಯದ ಎಲ್ಲಾ ಚಟುವಟಿಕೆಗಳನ್ನು ಈ ಭವನದಲ್ಲಿ ನಡೆಸಲಾಗುತ್ತದೆ. ಮಾಸ್ತಿಯವರು ಕನ್ನಡದ ಆಸ್ತಿ. ಆ ಆಸ್ತಿಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಲು ಈ ಭವನ ಸಹಕಾರಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಮಾಸ್ತಿಯವರು ಬಡ ಕುಟುಂಬದಲ್ಲಿ ಜನಿಸಿದವರು. ತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡಿಗರ ಮನಗೆದ್ದವರು. ಅವರ ವಿಚಾರ ಭಂಡಾರವು ಪ್ರಸ್ತುತ ಸನ್ನಿವೇಶಕ್ಕೆ ಹೇಗೆ ಸಹಕಾರಿಯಾಗುತ್ತದೆ ಎಂಬುದರ ಕುರಿತು ಸಂಶೋಧನೆ ನಡೆಯಬೇಕು. ಆ ಕೆಲಸ ಈ ಭವನದ ಮೂಲಕವೇ ಆಗಲಿ’ ಎಂದು ತಿಳಿಸಿದರು.

‘ಆರ್ಥಿಕ ಮಾನದಂಡದ ಆಧಾರದಲ್ಲೇ ರಾಜ್ಯವೊಂದರ ಪ್ರಗತಿ ಅಳೆಯಲು ಸಾಧ್ಯವಿಲ್ಲ. ಆರ್ಥಿಕತೆಯ ಜೊತೆಯಲ್ಲಿ ಸಾಹಿತ್ಯಿಕ, ಸಾಮಾಜಿಕ ಹಾಗೂ ಮೌಲ್ವಿಕ ಮಾನದಂಡಗಳೂ ಮುಖ್ಯವಾಗುತ್ತವೆ.‌ ಸಾಹಿತ್ಯವು ಚಿಂತನೆಯನ್ನು ಅಭಿವ್ಯಕ್ತಗೊಳಿಸುವ ಮಾಧ್ಯಮ. ಮಾಸ್ತಿಯವರ ಚಿಂತನೆ, ಬರಹ ಹಾಗೂ ಸಾಹಿತ್ಯ ನನಗೆ ಅತ್ಯಂತ ಪ್ರಿಯವಾದುದು. ನಾವು ವ್ಯಾಪಾರ ಹಾಗೂ ಆರ್ಥಿಕತೆಯಲ್ಲಿ ಪಾಪ ಪುಣ್ಯ ನೋಡುತ್ತಿದ್ದೇವೆ. ಆದರೆ ತತ್ವಜ್ಞಾನದಲ್ಲಿ ಲಾಭ–ನಷ್ಟ ಹುಡುಕುತ್ತಿದ್ದೇವೆ’ ಎಂದರು.

‘ಮಾಸ್ತಿ ಹಾಗೂ ಅವರ ವಿಚಾರಗಳು ಕನ್ನಡಕ್ಕಷ್ಟೇ ಸೀಮಿತವಾಗಬಾರದು. ಅವರನ್ನು ಭಾರತದ ಆಸ್ತಿಯನ್ನಾಗಿ ಮಾಡಬೇಕು. ಅದಕ್ಕೆ ನಮ್ಮ ಸರ್ಕಾರ ಬದ್ಧವಿದೆ. ಚಂದ್ರಶೇಖರ ಕಂಬಾರ ಅವರ ಒತ್ತಾಸೆಯಿಂದಾಗಿ ನನ್ನ ಕ್ಷೇತ್ರದಲ್ಲಿ ಜಾನಪದ ವಿಶ್ವವಿದ್ಯಾಲಯ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಕಂಬಾರರಿಂದ ನಮ್ಮ ಸರ್ಕಾರಕ್ಕೆ ಮತ್ತಷ್ಟು ಮಾರ್ಗ‌ದರ್ಶನದ ಅಗತ್ಯವಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.