ಬೆಂಗಳೂರು: ಹಳೇ ದ್ವೇಷದ ಕಾರಣ ವ್ಯಕ್ತಿಯೊಬ್ಬನಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಐವರು ಆರೋಪಿಗಳನ್ನು ಮಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಲ್ಲೇಶ್ವರದ ನಿವಾಸಿಗಳಾದ ಅಫ್ಜಲ್ ಖಾನ್, ಸೈಯದ್ ವಸೀಂ, ಜಯಿದ್ ಭಾಷಾ, ಸೈಯದ್ ಹಫೀಜ್ ಮತ್ತು ಸಲೀಂ ಪಾಷಾ ಬಂಧಿತರು. ಮಹಮ್ಮದ್ ಜಾವೀದ್ ಹಲ್ಲೆಗೊಳಗಾದವರು. ಮಹಮ್ಮದ್ ನಜೀರ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಮ್ಮದ್ ಜಾವೀದ್ ಹಾಗೂ ಆರೋಪಿಗಳು ಅಕ್ಕಪಕ್ಕದ ಮನೆಯ ನಿವಾಸಿಗಳಾಗಿದ್ದು, ಮಹಮ್ಮದ್ ಜಾವೀದ್ ಹಾಗೂ ಅಫ್ಜಲ್ ಖಾನ್ ನಡುವೆ ಈ ಹಿಂದೆಯೂ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆಯಾಗಿತ್ತು. ಶನಿವಾರ ರಾತ್ರಿ ಇಬ್ಬರ ನಡುವೆ ಮತ್ತೆ ಗಲಾಟೆಯಾಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಉಳಿದ ಆರೋಪಿಗಳು ಜಾವೀದ್ ಮೇಲೆ ಹಲ್ಲೆ ಮಾಡಿದ್ದಾರೆ.
‘ಅಫ್ಜಲ್ ಪಕ್ಕದಲ್ಲಿಯೇ ಇದ್ದ ಮಟನ್ ಅಂಗಡಿಯಲ್ಲಿದ್ದ ಮಚ್ಚು ತಂದು ಜಾವೀದ್ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಅಫ್ಜಲ್ ಮತ್ತು ಸಲೀಂ ಪಾಷಾ ವಿರುದ್ಧ ಈ ಹಿಂದೆಯೂ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು’ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.