ADVERTISEMENT

ಮೊಬೈಲ್‌ ಕದಿಯಲು ದೆಹಲಿಯಿಂದ ಬಂದವರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:45 IST
Last Updated 23 ಮಾರ್ಚ್ 2022, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆನ್‌ಲೈನ್‌ ಮೂಲಕ ನಗರದಲ್ಲಿ ಆಯೋಜನೆಯಾಗಿದ್ದ ಡಿಜೆ ಕಾರ್ಯಕ್ರಮವೊಂದರ ಮಾಹಿತಿ ಪಡೆದು, ಮೊಬೈಲ್‌ ಕದಿಯಲೆಂದೇ ವಿಮಾನವೇರಿ ನವದೆಹಲಿಯಿಂದ ಬಂದಿದ್ದ ನಾಲ್ವರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸದ್ದಾಂ (32), ವಸೀಂ ಅಹಮದ್‌ (32), ಮೊಹಮ್ಮದ್‌ ಆದಿಲ್‌ (33) ಹಾಗೂ ಇರ್ಷಾದ್‌ (29) ಬಂಧಿತರು. ಇವರಿಂದ ₹10.5 ಲಕ್ಷ ಮೌಲ್ಯದ ಒಟ್ಟು 24 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಹೋಳಿ ಹಬ್ಬದಂದು ನಗರದ ಮಾಲ್‌ವೊಂದರಲ್ಲಿ ಡಿಜೆ ಕಾರ್ಯಕ್ರಮ ಆಯೋಜನೆಯಾಗಿತ್ತು. ಅದರಲ್ಲಿ ಯುವಕರು ಹಾಗೂ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಆರೋಪಿಗಳು ಆನ್‌ಲೈನ್‌ ಮೂಲಕ ಪಡೆದುಕೊಂಡಿದ್ದರು. ಇದೇ 19ರಂದು ನಗರಕ್ಕೆ ಬಂದಿದ್ದ ಇವರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಬಂದಿದ್ದವರೆಲ್ಲಾ ನೃತ್ಯ ಮಾಡುತ್ತಿದ್ದಾಗ ಮೊಬೈಲ್‌ಗಳನ್ನು ಕಳವು ಮಾಡಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಕದ್ದ ಮೊಬೈಲ್‌ಗಳೊಂದಿಗೆ ದೆಹಲಿಗೆ ಹಿಂತಿರುಗುತ್ತಿದ್ದ ಆರೋಪಿಗಳು ಅಲ್ಲಿನ ಮೀನಾ ಬಜಾರ್‌ನಲ್ಲಿ ಅವುಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು. ವಿಚಾರಣೆ ವೇಳೆ ಇದನ್ನು ತಿಳಿಸಿದ್ದಾರೆ. ದೊಡ್ಡ ದೊಡ್ಡ ಸಮಾರಂಭಗಳನ್ನೇ ಗುರಿಯಾಗಿಟ್ಟುಕೊಂಡು ಕಳವು ಮಾಡುತ್ತಿದ್ದರು ಎಂಬುದೂ ಗೊತ್ತಾಗಿದೆ’ ಎಂದು ಹೇಳಿದ್ದಾರೆ.

ಕದ್ದ ಬೈಕ್‌ನಲ್ಲಿ ಸಂಚರಿಸಿ ಸುಲಿಗೆ
ಕದ್ದ ಬೈಕ್‌ನಲ್ಲಿ ನಗರದಲ್ಲೆಲ್ಲಾ ಸುತ್ತಾಡಿ, ಒಂಟಿಯಾಗಿ ಓಡಾಡುವವರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ ₹5 ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನ ಹಾಗೂ 7 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

‘ಅಂಧ್ರಹಳ್ಳಿಯ ಆಂಜಿ (21) ಹಾಗೂ ಮುಗಳೂರು ಗ್ರಾಮದ ಶಶಿಕುಮಾರ್‌ (22) ಬಂಧಿತರು. ಇವರು ನಗರದಲ್ಲಿ ನೆಲೆಸಿರುವ ಉತ್ತರ ಭಾರತೀಯರನ್ನೇ ಗುರಿಯಾಗಿಟ್ಟುಕೊಂಡು ಸುಲಿಗೆ ಮಾಡುತ್ತಿದ್ದರು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಡಿಸೆಂಬರ್‌ 15ರ ಮುಂಜಾನೆ ವ್ಯಕ್ತಿಯೊಬ್ಬರು ಕೆಲಸ ಮುಗಿಸಿಕೊಂಡು ಕಚೇರಿಯಿಂದ ಮನೆಗೆ ನಡೆದು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿದ್ದ ಆರೋಪಿಗಳು ಲ್ಯಾಪ್‌ಟಾಪ್‌, ಮೊಬೈಲ್‌ ಹಾಗೂ ನಗದು ಇದ್ದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.