ADVERTISEMENT

ಮಹರ್ಷಿ ವಾಲ್ಮೀಕಿ ಪರಿವರ್ತನೆಯ ಹರಿಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 6:28 IST
Last Updated 20 ಅಕ್ಟೋಬರ್ 2021, 6:28 IST
   

ಬೆಂಗಳೂರು: ‘ಮಹರ್ಷಿ ವಾಲ್ಮೀಕಿ ಪರಿವರ್ತನೆಯ ಹರಿಕಾರ. ಒಬ್ಬ ವ್ಯಕ್ತಿಯಲ್ಲಿ ಪರಿವರ್ತನೆಯಾರೆ ದೈವದತ್ತವಾದುದನ್ನು ಮುಟ್ಟಬಹುದು ಎಂದು ಅವರು ತೋರಿಕೊಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಿಧಾನಸೌಧದ ಬಳಿ ಇರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.

‘ವಾಲ್ಮೀಕಿ ಸಮುದಾಯದ ಬೆಳೆಯುತ್ತಿರುವ ಜನಸಂಖ್ಯೆ, ಅವರ ಆಶೋತ್ತರಗಳ ಬಗ್ಗೆ ಸಮಾಜ ಜಾಗೃತವಾಗಿದೆ. ಈ ಸಮುದಾಯ ಬೇಡಿಕೆಗಳ ಬಗ್ಗೆ ಗಂಭೀರ ಚಿಂತನೆ ಮಾಡಿ ಅವರಿಗೆ ನ್ಯಾಯ, ಅವಕಾಶ ಕೊಡುವ ಕೆಲಸವನ್ನು ಮಾಡಬೇಕಾಗಿದೆ’ ಎಂದರು.

ADVERTISEMENT

‘ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರ ರಜಾ ದಿನವೆಂದು ಘೋಷಿಸಿ, ಸರ್ಕಾರದ ವತಿಯಿಂದ ಜಯಂತಿಯನ್ನು ಆಚರಣೆ ಮಾಡಿಕೊಂಡು ಬಂದಿದೆ. ಅವರು ಜಗತ್ತು ಕಂಡ ಶ್ರೇಷ್ಠ ಮಹಾಕವಿ. ಜಗತ್ತಿನ 10 ಶ್ರೇಷ್ಠ ಸಾಹಿತ್ಯ ಕೃತಿಗಳಲ್ಲಿ ವಾಲ್ಮೀಕಿ ರಚಿಸಿದ ರಾಮಾಯಣ ಕೂಡಾ ಇಂದು. ಪ್ರತಿಯೊಬ್ಬರ ಬದುಕಿನಲ್ಲಿ ಅದು ಹಾಸುಹೊಕ್ಕಾಗಿದೆ. ಎಲ್ಲರಿಗೂ ಆದರ್ಶವಾಗಿದೆ. ನಾವೆಲ್ಲರೂ ಅದರಿಂದ ಜೀವನದ ಪಾಠ ಕಲಿಯುವಂತಾಗಿದೆ’ ಎಂದರು.

‘ವಾಲ್ಮೀಕಿಯ ದೊಡ್ಡ ಕುಲ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇದೆ. ಈ ಕುಲ ತನ್ನ ಸ್ವಾಭಿಮಾನದ ಬದುಕು, ಕಾಯಕ ಮಾಡುವ ಮೂಲಕ ಇವತ್ತು ನಡೆಸಿಕೊಂಡು ಬಂದಿದೆ. ಸಮುದಾಯುದ ನಾಯಕರು ಈ ದೇಶ ಕಟ್ಟಲು, ಕಾಯಲು, ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಧರ್ಮದ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು. ನಾವು ಅವರನ್ನು ಸ್ಮರಣೆ ಮಾಡಬೇಕಾಗಿದೆ‘ ಎಂದರು.

‘ಈ ಕುಲಕ್ಕೆ ಒನಕೆಓಬವ್ವ, ಸಿಂಧೂರ ಲಕ್ಷ್ಮಣ, ಏಕಲವ್ಯ, ಹಲಗಲಿ ಬೇಡರು, ಸುರಪುರ ರಾಜರು ಹೀಗೆ ದೊಡ್ಡ ಇತಿಹಾಸ, ಪರಂಪರೆ ಇದೆ. ಇದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕಾಗಿದೆ. ಈ ಜನಾಂಗ ಕೂಡಾ ಎಲ್ಲರಂತೆ ವಿದ್ಯೆ, ಉದ್ಯೋಗದಲ್ಲಿ ಮುಂದೆ ಬರಬೇಕು‘ ಎಂದೂ ಮುಖ್ಯಮಂತ್ರಿ ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.