ADVERTISEMENT

‘ಬಿಎಸ್‌ಪಿಗೆ ದ್ರೋಹ ಬಗೆದ ಮಹೇಶ್‌’

ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರೋಪ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 19:53 IST
Last Updated 11 ಆಗಸ್ಟ್ 2021, 19:53 IST

ಬೆಂಗಳೂರು: ‘ಬಹುಜನ ಸಮಾಜ ಪಕ್ಷದಿಂದ (ಬಿಎಸ್‌ಪಿ) ಎಲ್ಲವನ್ನೂ ಪಡೆದಿರುವ ಶಾಸಕ ಎನ್‌. ಮಹೇಶ್‌ ಈಗ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ’ ಎಂದು ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶೋಕ್‌ ಸಿದ್ಧಾರ್ಥ್‌ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಸೇವೆಯಿಂದ ಸ್ವಯಂನಿವೃತ್ತಿ ಪಡೆದಿದ್ದ ಒಬ್ಬ ವ್ಯಕ್ತಿಗೆ ಎಲ್ಲ ರೀತಿಯ ಸಹಕಾರವನ್ನೂ ನೀಡಿ, ಶಾಸಕನನ್ನಾಗಿ ಮಾಡಿದ್ದು ಬಿಎಸ್‌ಪಿ. ಓಡಾಡಲು ಅವರ ಬಳಿ ಕಾರು ಇರಲಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಓಡಾಡುತ್ತಿದ್ದರು. ಮೂರು ಕಾರುಗಳನ್ನು ಪಕ್ಷದಿಂದ ನೀಡಿದೆವು. ಎಲ್ಲ ಅವಕಾಶಗಳನ್ನೂ ಪಡೆದು, ಬಿಜೆಪಿಗೆ ವಲಸೆ ಹೋಗಿರುವ ಮಹೇಶ್‌ ಈಗ ಬಿಎಸ್‌ಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ದೇಶದ ಪಾಲಿಗೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಪಕ್ಷಗಳು ಯಾವತ್ತೂ ಬಹುಜನರ ಪರವಾಗಿ ಕೆಲಸ ಮಾಡುವುದಿಲ್ಲ. ಆದರೆ, ಸ್ವಾರ್ಥ ಸಾಧನೆಗಾಗಿ ಬಿಜೆಪಿ ಸೇರಿರುವ ಮಹೇಶ್‌ ಅವರು ಈಗ ಅದನ್ನು ಸಮರ್ಥಿಸಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ದೂರಿದರು.

ADVERTISEMENT

ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಮಾತನಾಡಿ, ‘ಮಹೇಶ್‌ ಅವರು ಪಕ್ಷದ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಕಿಂಚಿತ್ತೂ ಹುರುಳಿಲ್ಲ. ತಮ್ಮ ಆತ್ಮಸಾಕ್ಷಿಯನ್ನೇ ಕೇಳಿಕೊಂಡರೆ ಗೊತ್ತಾಗುತ್ತದೆ’ ಎಂದರು.

ಒಬ್ಬ ಸಾಮಾನ್ಯ ಸರ್ಕಾರಿ ಅಧಿಕಾರಿಯಾಗಿದ್ದ ವ್ಯಕ್ತಿಗೆ ಬಿಎಸ್‌ಪಿ ಎಂಟು ಚುನಾವಣೆಗಳಲ್ಲಿ ಟಿಕೆಟ್‌ ನೀಡಿತ್ತು. ಪ್ರತಿ ಚುನಾವಣೆಯಲ್ಲೂ ಪಕ್ಷದಿಂದ ಆರ್ಥಿಕ ನೆರವನ್ನೂ ನೀಡಲಾಗಿತ್ತು. ಎಲ್ಲವನ್ನೂ ಬಳಸಿಕೊಂಡ ಅವರು, ಎಚ್‌.ಡಿ. ಕುಮಾರಸ್ವಾಮಿ ಅವರ ವಿಶ್ವಾಸಮತ ಯಾಚನೆ ವೇಳೆ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳಲಿಲ್ಲ. ಸದನದಲ್ಲಿ ಹಾಜರಿದ್ದು, ತಟಸ್ಥರಾಗುವಂತೆ ಪಕ್ಷದ ವರಿಷ್ಠರು ಸೂಚಿಸಿದ್ದರು. ಆದರೆ, ಮಹೇಶ್‌ ನಾಪತ್ತೆಯಾಗಿ ಬಿಜೆಪಿ ಜತೆ ಕೈಜೋಡಿಸಿದ್ದರು ಎಂದು ಆಪಾದಿಸಿದರು.

ಬಿಎಸ್‌ಪಿ ರಾಜ್ಯ ಘಟಕದ ಸಂಯೋಜಕರಾದ ದಿನೇಶ್ ಗೌತಮ್‌, ಸುರೇಂದ್ರ ಸಿಂಗ್ ಕಲೋರಿಯಾ, ಮಾರಸಂದ್ರ ಮುನಿಯಪ್ಪ ಮತ್ತು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆರ್‌. ಮುನಿಯಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.