ADVERTISEMENT

ಬೆಂಗಳೂರು | ಬಿಎಂಆರ್‌ಸಿಎಲ್‌ ಎಂಡಿಯಾಗಿ ಮಹೇಶ್ವರ ರಾವ್‌ ನೇಮಕ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 16:26 IST
Last Updated 11 ಜನವರಿ 2024, 16:26 IST
ಎಂ. ಮಹೇಶ್ವರ ರಾವ್‌
ಎಂ. ಮಹೇಶ್ವರ ರಾವ್‌   

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲ್‌ ಕಾರ್ಪೊರೇಶನ್‌ ಲಿಮಿಟೆಡ್‌ನ (ಬಿಎಂಆರ್‌ಸಿಎಲ್‌) 8ನೇ ವ್ಯವಸ್ಥಾಪಕ ನಿರ್ದೇಶಕರಾಗಿ ಎಂ. ಮಹೇಶ್ವರ ರಾವ್‌ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.

ಕರ್ನಾಟಕ ಕೇಡರ್‌ನ 1995ರ ಬ್ಯಾಚ್‌ ಅಧಿಕಾರಿಯಾಗಿರುವ ಮಹೇಶ್ವರ ರಾವ್‌ ಹುದ್ದೆಯ ನಿರೀಕ್ಷೆಯಲ್ಲಿದ್ದರು. 

ಇಲ್ಲಿವರೆಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಂಜುಂ ಪರ್ವೇಜ್‌ ಅವರನ್ನು ಅವರೇ ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

ADVERTISEMENT

ರಾಕೇಶ್‌ ಸಿಂಗ್‌ ಅವರು ಮೂರು ತಿಂಗಳು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ 2021ರಲ್ಲಿ ವರ್ಗಾವಣೆಗೊಂಡಾಗ ‘ಬಿಎಂಆರ್‌ಸಿಎಲ್‌ಗೆ ಪೂರ್ಣಾವಧಿಯ ಎಂ.ಡಿ ಬೇಕು’ ಎಂಬ ಕೂಗು ಎದ್ದಿತ್ತು. ಅಂಜುಂ ಪರ್ವೇಜ್‌ ಅವರನ್ನು ಬಿಎಂಆರ್‌ಸಿಎಲ್‌ಗೆ ವರ್ಗ ಮಾಡಿದಾಗ ಅವರಿಗೆ ಬೇರೆ ಹೆಚ್ಚುವರಿ ಹುದ್ದೆಗಳನ್ನು ನೀಡದೇ ಈ ಕೂಗಿಗೆ ಸ್ಪಂದಿಸಲಾಗಿತ್ತು. ಆದರೆ, ಮುಂದೆ ಅವರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ಹೊಣೆ ನೀಡಲಾಗಿತ್ತು.

‘ನಮ್ಮ ಮೆಟ್ರೊ’ಗೆ ಪೂರ್ಣಕಾಲಿಕ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಅವರನ್ನು ಒತ್ತಾಯಿಸಿದ್ದರು. ಪೂರ್ಣಾವಧಿ ಎಂಡಿ ಇಲ್ಲದ ಕಾರಣ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂದು ಸಚಿವರಿಗೆ ಮನವಿಯನ್ನೂ ಸಲ್ಲಿಸಿದ್ದರು.

ಮಹೇಶ್ವರ ರಾವ್‌ ಅವರನ್ನು ಬಿಎಂಆರ್‌ಸಿಎಲ್‌ ಎಂಡಿಯಾಗಿ ನೇಮಕ ಮಾಡುವಂತೆ ಮತ್ತು ಅವರಿಗೆ ಹೆಚ್ಚುವರಿಯಾಗಿ ಯಾವುದೇ ಹೊಣೆ ನೀಡದಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. 

ಮಹೇಶ್ವರ ರಾವ್‌ ಅವರನ್ನು ನೇಮಕ ಮಾಡಿದ ಬಗ್ಗೆ ತೇಜಸ್ವಿ ಸೂರ್ಯ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದು, ‘ನಗರದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತ್ವರಿತವಾಗಿ ನೇಮಕ ಮಾಡಿದ್ದಕ್ಕಾಗಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರಿಗೆ ಧನ್ಯವಾದಗಳು. ನಮ್ಮ ನಗರದ ಉನ್ನತ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳು ಅವರ ಗಮನಕ್ಕೆ ಬರುತ್ತವೆಂದು ನಾನು ಭಾವಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.