
ಯಲಹಂಕ: ಚುಮು ಚುಮು ಚಳಿಯನ್ನೂ ಲೆಕ್ಕಿಸದೇ ಸಾವಿರಾರು ಜನರು ಉತ್ಸಾಹದಿಂದ ಓಡಿದರು. ವಿದ್ಯಾರ್ಥಿಗಳು, ವೃತ್ತಿಪರ ಕ್ರೀಡಾಪಟುಗಳು, ಕಾರ್ಪೊರೇಟ್ ತಂಡಗಳು, ರಕ್ಷಣಾ ಮತ್ತು ಪೊಲೀಸ್ ಸಿಬ್ಬಂದಿ, ಫಿಟ್‌ನೆಸ್ ಪ್ರಿಯರು, ನಾಲ್ಕು ವರ್ಷದ ಪುಟಾಣಿಗಳಿಂದ ಹಿಡಿದು 94 ವರ್ಷದ ಹಿರಿಯರವರೆಗೆ ವಿವಿಧ ವಯೋಮಾನದವರು ಓಡಿ ಖುಷಿಪಟ್ಟರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನಲ್ಲಿ ’ಹಸಿರಿಗಾಗಿ ಓಡಿ, ಸ್ವಚ್ಛಂದವಾಗಿ ಉಸಿರಾಡಿʼ ಎಂಬ ಧ್ಯೇಯದೊಂದಿಗೆ ಭಾನುವಾರ ಆಯೋಜಿಸಿದ್ದ ‘ಮಾಹೆಥಾನ್ 2026’ ಓಟದಲ್ಲಿ 10 ಸಾವಿರಕ್ಕೂ ಹೆಚ್ಚು ಕ್ರೀಡಾಸಕ್ತರು ಭಾಗಿಯಾದರು.
ಪೋಷಕರು ಪುಟ್ಟ ಕಂದಮ್ಮಗಳನ್ನೂ ಕರೆದುಕೊಂಡು ಬಂದು ಅವರೊಂದಿಗೆ ಓಡಿ ಸಂಭ್ರಮಿಸಿದರು.
ʼಪ್ರಜಾವಾಣಿʼ ಮತ್ತು ʼಡೆಕ್ಕನ್ ಹೆರಾಲ್ಡ್ʼ ಮಾಧ್ಯಮ ಸಹಯೋಗದಲ್ಲಿ ಆಕ್ಸಿಸ್ ಬ್ಯಾಂಕ್ ಸಹಕಾರದೊಂದಿಗೆ ಏರ್ಪಡಿಸಿದ್ದ ಈ ಓಟದಲ್ಲಿ ಆರೋಗ್ಯ, ಸಮುದಾಯದ ಸಹಭಾಗಿತ್ವ ಮತ್ತು ಸುಸ್ಥಿರ ಬದುಕಿನ ಮಹತ್ವವನ್ನು ಸಾರಿದ್ದು ವಿಶೇಷವಾಗಿತ್ತು. ಮಾಹೆ ಬೆಂಗಳೂರು ಕ್ಯಾಂಪಸ್‌ನ ಆವರಣದಿಂದ ಆರಂಭಗೊಂಡ ಓಟ ನಿಗದಿತ ಮಾರ್ಗದಲ್ಲಿ ಮುಂದುವರಿದು ಕ್ಯಾಂಪಸ್‌ನಲ್ಲಿಯೇ ಮುಕ್ತಾಯಗೊಂಡಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವಲ್ಲಿ ಮಣಿಪಾಲ್ ಸಮೂಹ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಬೆಂಗಳೂರು ಹಾಗೂ ಇತರೆ ಪ್ರದೇಶಗಳಿಂದ ಸ್ಪರ್ಧಿಗಳು ಬಂದಿರುವುದು ಮಣಿಪಾಲ್ ಸಂಸ್ಥೆಗಳ ಮೇಲೆ ಜನರಿಗಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯ ಕಾರ್ಯಕ್ರಮಗಳು ನಮ್ಮ ಭಾಗದ ಜನರಿಗೆ ಹೊಸ ಅವಕಾಶಗಳನ್ನು ತೆರೆಯುತ್ತವೆ’ ಎಂದು ಹೇಳಿದರು.
ಮಾಹೆ ಬೆಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ.ಮಧು ವೀರರಾಘವನ್ ಮಾತನಾಡಿ, ‘ಮಾಹೆಥಾನ್ ಓಟದಲ್ಲಿ ಪಾಲ್ಗೊಂಡಿರುವ ಪ್ರತಿ ಸ್ಪರ್ಧಿಯಲ್ಲೂ ಕಾಣುತ್ತಿರುವ ಅದಮ್ಯ ಉತ್ಸಾಹ ಕಂಡು ಖುಷಿಯಾಗಿದೆ. ನಾವೆಲ್ಲರೂ ಒಗ್ಗೂಡಿ ಮಾಹೆ ಸಮುದಾಯಕ್ಕಾಗಿ ಒಂದು ಅದ್ಭುತ ಮೈಲಿಗಲ್ಲನ್ನು ನಿರ್ಮಿಸಿದ್ದೇವೆ’ ಎಂದು ತಿಳಿಸಿದರು.
ಯಲಹಂಕದ ರಸ್ತೆಗಳ ಸುಧಾರಣೆಗೆ ಈಗಾಗಲೇ ಕ್ರಮ ಕೈಗೊಂಡಿದ್ದರೂ ರಸ್ತೆಗಳ ದುರಸ್ತಿ ಅಗತ್ಯವಿದೆ. ಮಾಹೆಥಾನ್-2027ರ ವೇಳೆಗೆ ಎಲ್ಲಾ ರಸ್ತೆಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತೇನೆಎಸ್.ಆರ್.ವಿಶ್ವನಾಥ್, ಶಾಸಕ, ಯಲಹಂಕ
ಹೆಚ್ಚುವರಿ ಕುಲಸಚಿವ ಡಾ. ರಾಘವೇಂದ್ರ ಪ್ರಭು ಮಾತನಾಡಿ, ‘ಪರಿಸರ ಜಾಗೃತಿ ಮತ್ತು ಸಮುದಾಯದ ಅಭಿವೃದ್ಧಿಗೆ ಮಾಹೆ ನೀಡುತ್ತಿರುವ ಕೊಡುಗೆಯನ್ನು ಮುಂದುವರಿಸುವ ನಿಟ್ಟಿನಲ್ಲಿ, ಪ್ರತಿವರ್ಷ ಜನವರಿ ನಾಲ್ಕನೇ ಭಾನುವಾರ ಮಾಹೆಥಾನ್ ಆಯೋಜಿಸಲಾಗುವುದು’ ಎಂದು ಘೋಷಿಸಿದರು.
ಆಕ್ಸಿಸ್ ಬ್ಯಾಂಕ್ ಲಿಮಿಟೆಡ್‌ನ ಉಪಾಧ್ಯಕ್ಷ ರಾಹುಲ್ ಮಾಥೂರ್, ಮಾಹೆ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್.ಕೆ ರಾವ್, ಸಿಒಒ ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು.
₹13.75 ಲಕ್ಷ ಬಹುಮಾನ
ಹಾಫ್ ಮ್ಯಾರಾಥಾನ್ (21.1ಕೆ) 10ಕೆ 5ಕೆ ಹಾಗೂ 3ಕೆ ಫನ್ ರನ್ ಎಂಬ ಓಟದ ವಿಭಾಗಗಳನ್ನು ಆಯೋಜಿಸಲಾಗಿತ್ತು. ಸಶಸ್ತ್ರಪಡೆ ಸಿಬ್ಬಂದಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪ್ರತಿ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ವೇಗದ ಓಟಗಾರರನ್ನು ಗುರುತಿಸಿ ಗೌರವಿಸಲಾಯಿತು. ಎಲ್ಲಾ ವಿಭಾಗಗಳ ವಿಜೇತರಿಗೆ ಒಟ್ಟು ₹13.75 ಲಕ್ಷ ಮೊತ್ತದ ನಗದು ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.