ADVERTISEMENT

ಮೆಟ್ರೊ ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿ ಪತ್ತೆ: ನಾಣ್ಯ, ತಾಯತದಿಂದ ‘ಬೀಪ್’ ಶಬ್ದ

ಕುಟುಂಬ ಸಮೇತ ನಗರಕ್ಕೆ ಬಂದಿದ್ದ ಸಾಜಿದ್ ಖಾನ್

​ಪ್ರಜಾವಾಣಿ ವಾರ್ತೆ
Published 11 ಮೇ 2019, 20:10 IST
Last Updated 11 ಮೇ 2019, 20:10 IST
ಬೆಂಗಳೂರು ಮೆಟ್ರೊ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಸಂಚಾರ
ಬೆಂಗಳೂರು ಮೆಟ್ರೊ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಸಂಚಾರ   

ಬೆಂಗಳೂರು: ಮೆಜೆಸ್ಟಿಕ್‌ನ ಮೆಟ್ರೊ ನಿಲ್ದಾಣಕ್ಕೆ ಬಂದು ತಪಾಸಣೆಗೆ ನಿರಾಕರಿಸಿ ಅನುಮಾನಾಸ್ಪದ ನಡೆ ತೋರಿದ್ದ ವ್ಯಕ್ತಿ ರಾಜಸ್ಥಾನದ ಸಾಜಿದ್ ಖಾನ್.

ಆ ಬಗ್ಗೆ ಶನಿವಾರ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್, ‘ರಂಜಾನ್ ನಿಮಿತ್ತ ಮಸೀದಿಗಳ ಎದುರು ದಾನ (ಝಕಾತ್) ಪಡೆಯುವುದಕ್ಕಾಗಿ ಸಾಜಿದ್, ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ನಗರಕ್ಕೆ ಬಂದಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಅಮಾಯಕರು ಎಂಬುದು ತಿಳಿಯಿತು’ ಎಂದರು.

‘ದಾನವಾಗಿ ಬಂದಿದ್ದ ನಾಣ್ಯಗಳನ್ನು ಜುಬ್ಬಾದಲ್ಲಿಟ್ಟುಕೊಂಡಿದ್ದ ಅವರು, ಮಸೀದಿಗೆ ಹೋಗಲೆಂದು ಮೇ 6ರ ಸಂಜೆ ಮೆಜೆಸ್ಟಿಕ್‌ನ ಮೆಟ್ರೊ ನಿಲ್ದಾಣದೊಳಗೆ ಹೊರಟಿದ್ದರು. ಜೇಬಿನಲ್ಲಿದ್ದ ನಾಣ್ಯಗಳು ಹಾಗೂ ಸೊಂಟಕ್ಕೆ ಕಟ್ಟಿಕೊಂಡಿದ್ದ ತಾಯತಗಳಿಂದ ಲೋಹ ಶೋಧಕದಲ್ಲಿ ಕೆಂಪು ದೀಪ ಹೊತ್ತಿಕೊಂಡು ‘ಬೀಪ್’ ಶಬ್ದ ಮೊಳಗಿತ್ತು. ಅದು, ಸೆಕ್ಯುರಿಟಿ ಗಾರ್ಡ್‌ನ ಅನುಮಾನಕ್ಕೆ ಕಾರಣವಾಗಿತ್ತು’ ಎಂದು ಹೇಳಿದರು.

‘ಜುಬ್ಬಾದಲ್ಲಿದ್ದ ವಸ್ತುವನ್ನು ತೋರಿಸುವಂತೆ ಸೆಕ್ಯುರಿಟಿ ಗಾರ್ಡ್, ಕನ್ನಡ ಭಾಷೆಯಲ್ಲಿ ಕೇಳಿದ್ದರು. ಸಾಜಿದ್ ಅವರಿಗೆ ಕನ್ನಡ ಅರ್ಥವಾಗಿರಲಿಲ್ಲ. ಸೆಕ್ಯುರಿಟಿ ಗಾರ್ಡ್‌ನ ವರ್ತನೆಯಿಂದ ಭಯಗೊಂಡು ಅವರು ನಿಲ್ದಾಣದಿಂದ ಹೊರಟು ಹೋಗಿದ್ದರು’ ಎಂದು ತಿಳಿಸಿದರು.

ಲಾಡ್ಜ್‌ನಲ್ಲಿ ವಾಸ: ‘ಸಾಜಿದ್ ಪ್ರತಿವರ್ಷ ರಂಜಾನ್‌ ಮಾಸಕ್ಕೆ ಬೆಂಗಳೂರಿಗೆ ಬರುತ್ತಾರೆ. ಇಲ್ಲಿಯ ಮಸೀದಿಗಳ ಎದುರು ಕುಳಿತು, ಜನರು ಕೊಡುವ ದಾನ ಪಡೆದುಕೊಳ್ಳುತ್ತಾರೆ. ಹಬ್ಬ ಮುಗಿದ ಬಳಿಕ ವಾಪಸು ಹೋಗುತ್ತಾರೆ. ಅಂತೆಯೇ 15 ದಿನಗಳ ಹಿಂದೆ ನಗರಕ್ಕೆ ಬಂದು ಕಾಟನ್‌ಪೇಟೆಯ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಅಲ್ಲಿಂದಲೇ ನಿತ್ಯವೂ ಮಸೀದಿಗಳ ಬಳಿ ಹೋಗಿ ದಾನ ಪಡೆದುಕೊಂಡು ವಾಪಸ್‌ ಬರುತ್ತಿದ್ದರು. ಅವರ ವಿಳಾಸ ಹಾಗೂ ಪೂರ್ವಾಪರದ ಮಾಹಿತಿ ನೀಡುವಂತೆ ರಾಜಸ್ಥಾನದ ಪೊಲೀಸರನ್ನು ಕೋರಿದ್ದೇವೆ’ ಎಂದು ಕಮಿಷನರ್‌ ಹೇಳಿದರು.

‘ವಿಡಿಯೊ ಎಡಿಟ್ ಮಾಡಿ ಬಾಂಬ್ ಅಂದ್ರು’
‘ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯವನ್ನು ಎಡಿಟ್ ಮಾಡಿದ್ದ ಕೆಲ ವಾಹಿನಿಗಳು, ತಾವೇ ಆ ವ್ಯಕ್ತಿಯ ಸೊಂಟಕ್ಕೆ ಬೆಲ್ಟ್‌ ಹಾಕಿ ಅದುವೇ ಬಾಂಬ್ ಎಂದು ಸುದ್ದಿ ಪ್ರಸಾರ ಮಾಡಿದವು. ಜನರಲ್ಲಿ ಆತಂಕಕ್ಕೆ ದೂಡುವ ಕೆಲಸ ಮಾಡಿದವು’ ಎಂದು ಕಮಿಷನರ್ ಬೇಸರ ವ್ಯಕ್ತಪಡಿಸಿದರು.

‘ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿ, ತನಗೆ ಸಹಾಯ ಮಾಡಲು ಸೆಕ್ಯುರಿಟಿ ಗಾರ್ಡ್‌ಗೆ ₹ 1 ಕೋಟಿ ಆಮಿಷವೊಡ್ಡಿದ್ದ. ಸ್ವಚ್ಛತಾ ಕೆಲಸದ ಮಹಿಳೆಯನ್ನು ಮಾತನಾಡಿಸಿ ಸಹಾಯ ಕೋರಿದ್ದ ಎಂಬಿತ್ಯಾದಿ ಸುಳ್ಳು ಸುದ್ದಿಗಳೂ ಹರಿದಾಡಿದವು’ ಎಂದರು.

ಸಾರ್ವಜನಿಕರು ನೀಡಿದ್ದ ಸುಳಿವು
‘ಆ ವ್ಯಕ್ತಿಯ ಪತ್ತೆಗೆ ಶೋಧ ನಡೆಸುತ್ತಿದ್ದ ಪೊಲೀಸರು, ವ್ಯಕ್ತಿಯ ಫೋಟೊವನ್ನು ಶುಕ್ರವಾರ ಬಿಡುಗಡೆ ಮಾಡಿದ್ದರು. ಅದನ್ನು ನೋಡಿ ಉಪ್ಪಾರಪೇಟೆ ಠಾಣೆಗೆ ಕರೆ ಮಾಡಿದ್ದ ಆರ್‌.ಟಿ.ನಗರದ ವ್ಯಕ್ತಿಯೊಬ್ಬರು, ‘ಫೋಟೊದಲ್ಲಿರುವ ವ್ಯಕ್ತಿ, ನಮ್ಮ ಮಸೀದಿ ಎದುರು ಕುಳಿತುಕೊಂಡಿದ್ದಾನೆ’ ಎಂದು ಸುಳಿವು ನೀಡಿದ್ದರು. ಪೊಲೀಸರು, ಮಸೀದಿಯತ್ತ ಹೋದಾಗ ರಸ್ತೆಯಲ್ಲೇ ಸಾಜಿದ್‌ ಸಿಕ್ಕರು’ ಎಂದು ಸುನೀಲ್‌ಕುಮಾರ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.