ADVERTISEMENT

ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಸಡಗರ: ಖರೀದಿ ಭರಾಟೆ

ಕಬ್ಬು, ಗೆಣಸು ಹಾಗೂ ಅವರೆಕಾಯಿ ರಾಶಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 2:51 IST
Last Updated 14 ಜನವರಿ 2020, 2:51 IST
ಕೆ.ಆರ್‌.ಮಾರುಕಟ್ಟೆಯಲ್ಲಿ ಲಾರಿಗಳಿಂದ ಕಬ್ಬುಇಳಿಸುತ್ತಿರುವ ದೃಶ್ಯ ಸೋಮವಾರ ಕಂಡು ಬಂತು -ಪ್ರಜಾವಾಣಿ ಚಿತ್ರ 
ಕೆ.ಆರ್‌.ಮಾರುಕಟ್ಟೆಯಲ್ಲಿ ಲಾರಿಗಳಿಂದ ಕಬ್ಬುಇಳಿಸುತ್ತಿರುವ ದೃಶ್ಯ ಸೋಮವಾರ ಕಂಡು ಬಂತು -ಪ್ರಜಾವಾಣಿ ಚಿತ್ರ    
""

ಬೆಂಗಳೂರು: ಸಂಕ್ರಾಂತಿ ಹಬ್ಬ ಸಮೀಪಿಸಿದಂತೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ವಹಿವಾಟು ಗರಿಗೆದರಿದೆ. ಸೋಮವಾರದಿಂದಲೇ ಸಂಕ್ರಾಂತಿ ವಿಶೇಷವಾದ ಕಬ್ಬು, ಗೆಣಸು ಹಾಗೂ ಅವರೆಕಾಯಿ ರಾಶಿ ಬಿದ್ದಿವೆ. ಖರೀದಿ ಭರಾಟೆಯೂ ಜೋರಾಗಿದೆ.

ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ನೋಡಿದಲ್ಲೆಲ್ಲ ಕಪ್ಪು ಹಾಗೂ ಕೆಂಪು ಬಣ್ಣದ ಕಬ್ಬುಗಳ ರಾಶಿ. ಕಬ್ಬಿನ ಜಲ್ಲೆ ₹ 50ರಂತೆ ಮಾರಾಟ ಆಗುತ್ತಿದೆ. ಉದ್ದನೆಯ ಕಬ್ಬನ್ನು ತುಂಡುಗಳಾಗಿ ಕತ್ತರಿಸಿ ಪ್ರತಿ ತುಂಡಿಗೆ ₹10ರಿಂದ ₹20ರಂತೆ ಮಾರಾಟ ಮಾಡಲಾಗುತ್ತಿದೆ.

ಬಸವನಗುಡಿಯ ಕಡಲೆಕಾಯಿ ಪರಿಷೆ ವೇಳೆ ಪ್ರತಿ ಕೆ.ಜಿ.ಗೆ ಗರಿಷ್ಠ ₹40ರಿಂದ ₹50ರಂತೆ ಮಾರಾಟವಾದ ಕಡಲೆಕಾಯಿ ಸಂಕ್ರಾಂತಿಗೆ ಮತ್ತಷ್ಟು ತುಟ್ಟಿಯಾಗಿದೆ. ಗುಣಮಟ್ಟದ ಕಡಲೆಕಾಯಿ ಪ್ರತಿ ಕೆ.ಜಿ.ಗೆ ₹100ರಂತೆ ಮಾರಾಟವಾಗುತ್ತಿದೆ. ಕಡಿಮೆ ಗುಣಮಟ್ಟದ್ದು ₹80ರಂತೆ ಮಾರಾಟ ಆಗುತ್ತಿದೆ.

ADVERTISEMENT

ವಾರದಿಂದಗಾಂಧಿ ಬಜಾರ್, ಮಲ್ಲೇಶ್ವರ,ಜಯನಗರ, ಯಶವಂತ ಪುರ, ರಾಜಾಜಿನಗರ, ಮಡಿವಾಳ, ಚಾಮರಾಜಪೇಟೆ, ಚಿಕ್ಕಪೇಟೆ ಗಳಲ್ಲಿ ಸಂಕ್ರಾಂತಿಗಾಗಿ ರಸ್ತೆಬದಿ ಹೆಚ್ಚುವರಿ ಮಳಿಗೆಗಳನ್ನು ತೆರೆಯಲಾಗಿದೆ. ಮಳಿಗೆಗಳಲ್ಲಿ ಎಳ್ಳು ಬೆಲ್ಲ ಮಿಶ್ರಿತ ಪೊಟ್ಟಣಗಳು, ಸಕ್ಕರೆ ಹಾಗೂ ಬೆಲ್ಲದ ಅಚ್ಚುಗಳನ್ನೂ ಮಾರಲಾಗುತ್ತಿದೆ.

ಎಳ್ಳು ಬೆಲ್ಲ ಮಿಶ್ರಿತ ಪೊಟ್ಟಣ ಗಳುವಿವಿಧ ಗಾತ್ರಗಳಲ್ಲಿ ಲಭ್ಯ ಇವೆ. ಸಣ್ಣ ಪೊಟ್ಟಣದ ದರ ₹40. ಮಳಿಗೆಗಳಲ್ಲಿ ಒಂದು ಕೆ.ಜಿ.ಯಎಳ್ಳುಬೆಲ್ಲ ಮಿಶ್ರಿತ ಪೊಟ್ಟಣದ ದರ ₹200ರಿಂದ ₹250 ರಷ್ಟಿದ್ದು, ಹಾಪ್‌ಕಾಮ್ಸ್‌ನಲ್ಲಿ ಪ್ರತಿ ಕೆ.ಜಿ.ಗೆ ₹195ರಂತೆ ಮಾರಾಟವಾಗುತ್ತಿದೆ.

***

ಕೆಲಸದ ಒತ್ತಡ ನಡುವೆ ಮನೆಯಲ್ಲೇ ಎಳ್ಳು ಬೆಲ್ಲ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಅಂಗಡಿಗಳಲ್ಲಿ ಸಿದ್ಧ ಎಳ್ಳುಬೆಲ್ಲ ಪೊಟ್ಟಣಗಳು ಲಭ್ಯವಿದ್ದು, ಹಂಚಲು ಅನುಕೂಲ.

- ಪದ್ಮಾ, ಚಾಮರಾಜಪೇಟೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.