ADVERTISEMENT

ಆತ್ಮಕಥೆಗಳು ನೈಜತೆಯಿಂದ ಕೊಡಿರಲಿ: ಶ್ರೀನಿವಾಸ ವರಖೇಡಿ

ಮಲ್ಲೇಪುರಂ ಅವರ ದಿಟದ ದೀವಟಿಗೆ ಆತ್ಮಕಥೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀನಿವಾಸ ವರಖೇಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2023, 16:25 IST
Last Updated 3 ಡಿಸೆಂಬರ್ 2023, 16:25 IST
ನಗರದ ಗಾಂಧಿಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಲ್ಲೇಪುರಂ ಜಿ. ವೆಂಕಟೇಶ್ ಅವರ ಆತ್ಮಕಥೆ ‘ದಿಟದ ದೀವಟಿಗೆ’ ಪುಸ್ತಕವನ್ನು ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ (ಎಡದಿಂದ ನಾಲ್ಕನೆಯವರು) ಬಿಡುಗಡೆಗೊಳಿಸಿದರು. (ಎಡದಿಂದ) ಜಿ. ಮಾದೇಶ, ಮಲ್ಲೇಪುರಂ ಜಿ. ವೆಂಕಟೇಶ, ವೂಡೇ ಪಿ. ಕೃಷ್ಣ, ಸಿ. ಸೋಮಶೇಖರ್ ಇದ್ದಾರೆ.
ನಗರದ ಗಾಂಧಿಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಲ್ಲೇಪುರಂ ಜಿ. ವೆಂಕಟೇಶ್ ಅವರ ಆತ್ಮಕಥೆ ‘ದಿಟದ ದೀವಟಿಗೆ’ ಪುಸ್ತಕವನ್ನು ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ (ಎಡದಿಂದ ನಾಲ್ಕನೆಯವರು) ಬಿಡುಗಡೆಗೊಳಿಸಿದರು. (ಎಡದಿಂದ) ಜಿ. ಮಾದೇಶ, ಮಲ್ಲೇಪುರಂ ಜಿ. ವೆಂಕಟೇಶ, ವೂಡೇ ಪಿ. ಕೃಷ್ಣ, ಸಿ. ಸೋಮಶೇಖರ್ ಇದ್ದಾರೆ.   

ಬೆಂಗಳೂರು: ‘ಆತ್ಮಕಥೆ ಎನ್ನುವುದು ಇತಿಹಾಸ, ಪ್ರವಾಸ ಕಥನವಾದರೆ ಅಲ್ಲಿ ವ್ಯಕ್ತಿ ಮರೆಯಾಗುತ್ತಾನೆ. ಸಾಹಿತ್ಯದ ಗದ್ಯ ಕೃತಿಯಾದರೆ ಅದು ಕಲ್ಪನಾ ಲೋಕವಾಗಲಿದೆ. ಆದ್ದರಿಂದ, ಆತ್ಮಕಥೆಗಳು ನೈಜತೆಯಿಂದ ಕೊಡಿರಬೇಕು’ ಎಂದು ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಅಂಕಿತ ಪುಸ್ತಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲ್ಲೇಪುರಂ ಜಿ. ವೆಂಕಟೇಶ ಅವರ ‘ದಿಟದ ದೀವಟಿಗೆ’ ಆತ್ಮಕಥೆ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಬಹಳಷ್ಟು ಜನ ಆತ್ಮಕಥೆಯ ಹೆಸರಿನಲ್ಲಿ ಸ್ವಗತವನ್ನು ಬರೆಯುತ್ತಾರೆ. ಆತ್ಮಕಥೆಯಲ್ಲಿ ಸ್ವ ಮತ್ತು ಅಹಂ ಇದ್ದರೆ ಅದು ಅಹಂಕಥನವಾಗುತ್ತದೆ. ಆತ್ಮಕಥೆ ಬರೆಯಬೇಕಾದರೆ ಮೊದಲು ಆ ವ್ಯಕ್ತಿಯೇ ಅದಕ್ಕೆ ಸಾಕ್ಷಿಯಾಗಬೇಕು. ಏಕೆಂದರೆ ತಾನು ಲೇಖಕನಾಗಿ ತನ್ನನ್ನು ತಾನು ಕಾಣದೇ ಒಬ್ಬ ಸಾಕ್ಷಿಯಾಗಿ ತನ್ನ ಜೀವನವನ್ನು ನೋಡಬೇಕಾಗುತ್ತದೆ. ಇಂತಹ ವಿಚಾರವನ್ನು ನಾನು ಮಲ್ಲೇಪುರಂ ಅವರ ಆತ್ಮಕಥೆಯಲ್ಲಿ ಕಂಡಿದ್ದೇನೆ’ ಎಂದರು.

ADVERTISEMENT

ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ, ‘ದಿಟದ ದೀವಟಿಗೆ’ ಆತ್ಮಕಥೆಯಲ್ಲಿ ಎಲ್ಲೂ ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ಬರೆದಿಲ್ಲ. ನನ್ನ ಜೀವನದಲ್ಲಿ ಮೂರ್ನಾಲ್ಕು ಮಂದಿ ಬಹಳಷ್ಟು,ನೋವು, ಸಂಕಷ್ಟಗಳನ್ನು ಕೊಟ್ಟಿದ್ದರು. ಹೀಗಾಗಿ ಈ ಜೀವನವೇ ಬೇಡ ಅನಿಸಿದ್ದೂ ಇದೆ. ಆದರೆ ಅದ್ಯಾವುದನ್ನು ಕೂಡ ಆತ್ಮಕಥೆಯಲ್ಲಿ ಬರೆದುಕೊಂಡಿಲ್ಲ. ಗುರುಬಲ ಮತ್ತು ಮಿತ್ರ ಬಲದಿಂದ ಎಲ್ಲ ಸಂಕಷ್ಟಗಳನ್ನು ಗೆದ್ದಿದ್ದೇನೆ’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ವಿದ್ವಾಂಸ ಎ.ವಿ. ಪ್ರಸನ್ನ, ಕಾದಂಬರಿಕಾರ ಕು. ವೀರಭದ್ರಪ್ಪ, ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಮುಂತಾದವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್, ಅಖಿಲ ಕರ್ನಾಟಕ ಕೊರಮ ಸಂಘದ ಅಧ್ಯಕ್ಷ ಜಿ. ಮಾದೇಶ ಇದ್ದರು.

ಪುಸ್ತಕ ಪರಿಚಯ ಪುಸ್ತಕ;ದಿಟದ ದೀವಟಿಗೆ ಲೇಖಕ;ಮಲ್ಲೇಪುರಂ ಜಿ. ವೆಂಕಟೇಶ ಪ್ರಕಾಶನ; ಅಂಕಿತ ಪುಸ್ತಕ ಪುಟ;568 ಬೆಲೆ;₹595

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.