ADVERTISEMENT

ಮಲ್ಲೇಶ್ವರ ಸೋಷಿಯಲ್‌ನಿಂದ ‘ಭರತನಾಟ್ಯ ಸಾಕು, ಫುಟ್‌ಪಾತ್‌ ಬೇಕು’ ವಿಡಿಯೊ

ಫುಟ್‌ಪಾತ್‌ ಮೇಲೆ ‘ತರಿಕಿಟಜಂ ತಜಣುತಕ...!

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 19:28 IST
Last Updated 24 ಅಕ್ಟೋಬರ್ 2018, 19:28 IST
ಪುಟ್‌ಪಾತ್ ಮೇಲೆ ಭರತನಾಟ್ಯದ ನೋಟ
ಪುಟ್‌ಪಾತ್ ಮೇಲೆ ಭರತನಾಟ್ಯದ ನೋಟ   

ಬೆಂಗಳೂರು: ತರಿಕಿಟಜಂ ತಜಣುತಕ... ಧ್ವನಿಗೆ ತಕ್ಕ ಘಲ್‌ ಘಲ್‌ ಗೆಜ್ಜೆನಾದ, ತಾಳ, ಈ ಹಿಮ್ಮೇಳಕ್ಕೆ ಹೆಜ್ಜೆ ಹಾಕುವ ಕಲಾವಿದೆಯರು...

– ಇದ್ಯಾವುದೋ ನೃತ್ಯ ಕಾರ್ಯಕ್ರಮವಲ್ಲ. ಮಲ್ಲೇಶ್ವರ 16ನೇ ಕ್ರಾಸ್‌ನ ಫುಟ್‌ಪಾತ್‌ ಮೇಲೆ ಸಾಗುವ ಪರದಾಟದ ಪರಿಯನ್ನು ಭರತನಾಟ್ಯದ ಮೂಲಕ ಮಾರ್ಮಿಕವಾಗಿ ವಿಡಂಬಿಸಿದ ನೋಟ.

ಇಂಥದ್ದೊಂದು ವಿಡಿಯೊ ಕೆಲ ದಿನಗಳಿಂದ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. 2.40 ಲಕ್ಷ ಜನ ವೀಕ್ಷಿಸಿದ್ದಾರೆ. ಸುಮಾರು 30 ಸಾವಿರ ಜನ ಹಂಚಿಕೊಂಡಿದ್ದಾರೆ.

ADVERTISEMENT

ನೃತ್ಯ ಹೀಗಿದೆ. ಮಲ್ಲೇಶ್ವರದ ಬೀದಿಯಲ್ಲಿ ಇಬ್ಬರು ಯುವತಿಯರು ನಡೆದುಕೊಂಡು ಬರುತ್ತಾರೆ. ಫುಟ್‌ಪಾತ್‌ ಮೇಲೆ ಸಾಗಲು ಮುಂದಾಗುತ್ತಾರೆ. ಆದರೆ, ಅಲ್ಲಿ ಬಿದ್ದ ಕಸ, ಗಲೀಜು, ಕಿತ್ತು ಹೋದ ಸ್ಲ್ಯಾಬ್‌ ನೋಡಿ ಬೇಸರಗೊಳ್ಳುತ್ತಾರೆ. ಹೇಗಪ್ಪಾ ಮುಂದೆ ಹೋಗುವುದು ಎಂದು ಯೋಚಿಸುತ್ತಾ ಚಪ್ಪಾಳೆ ತಟ್ಟುತ್ತಾರೆ. ಆಗ ತಾಳ, ತಂಬೂರಿ, ಕೊಳಲು ಹಿಡಿದ ಮೂವರು ಸಂಗೀತಗಾರರು ಬಂದು ಸಂಗೀತ ನುಡಿಸುತ್ತಾರೆ. ಅದಕ್ಕೆ ತಕ್ಕಂತೆ ಫುಟ್‌ಪಾತ್‌ ಮೇಲೆ ನಾಟ್ಯದ ಹೆಜ್ಜೆ ಹಾಕುತ್ತಾ ಜಿಗಿಯುತ್ತಾ ಸಾಗುತ್ತಾರೆ.

ಈ ಮಧ್ಯೆ ಫುಟ್‌ಪಾತ್‌ನ ಕಿತ್ತುಹೋದ ಸ್ಲ್ಯಾಬ್‌ ಮಧ್ಯೆ ನೃತ್ಯಗಾರ್ತಿಯ ಕಾಲು ಸಿಕ್ಕಿಹಾಕಿಕೊಳ್ಳುತ್ತದೆ. ಅದೇ ನೃತ್ಯ ಭಂಗಿಯಲ್ಲಿ ಕಾಲನ್ನು ಬಿಡಿಸಿಕೊಂಡು ಮುಂದೆ ಸಾಗುತ್ತಾರೆ. ಮಳಿಗೆಯೊಂದರ ಮುಂದೆ ನೃತ್ಯ ಮುಕ್ತಾಯಗೊಳ್ಳುತ್ತದೆ. ಒಟ್ಟು 1.14 ನಿಮಿಷದ ವಿಡಿಯೊ ಇಡೀ ರಸ್ತೆಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿದೆ. ‘ಭರತನಾಟ್ಯ ಸಾಕು; ಫುಟ್‌ಪಾತ್‌ ಬೇಕು’ ಎಂಬ ಹ್ಯಾಷ್‌ಟ್ಯಾಗ್‌ ಸಂದೇಶದೊಂದಿಗೆ ವಿಡಿಯೊ ಮುಕ್ತಾಯಗೊಳ್ಳುತ್ತದೆ.

ಮಲ್ಲೇಶ್ವರ ಸೋಷಿಯಲ್‌ ಸಂಘಟನೆಯ ಯುವಜನರು ಈ ವಿಡಿಯೊದ ಕರ್ತೃಗಳು. ಪ್ರೀತಿ ಸುಂದರಯ್ಯನ್‌, ಸೌಮ್ಯಾ ತಂತ್ರಿ, ಶ್ರೀರಾಂ ಅರವಮುದನ್‌, ರಾಘವೆಂದ್ರ ಪೈ, ಸುದರ್ಶನ್‌ ಗೋಪಾಲ್‌ ತಾರಾಗಣದಲ್ಲಿದ್ದಾರೆ. ಧನುಷ್ ಮತ್ತು ಸುಚಿತ್ರಾದೀಪ್‌ ಪ್ರೊಡಕ್ಷನ್‌ ತಂಡದಲ್ಲಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಗೀತಶ್ರೀರಾಂ ಅರವಮುದನ್‌ ಅವರದ್ದು. ಛಾಯಾಗ್ರಹಣ ಅನುಷಾ ಬದರಿನಾಥ್‌ ಅವರದ್ದು. ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಿಸಲು:https://www.youtube.com/watch?v=o-LqFXghUEA ಲಿಂಕ್‌ ಕ್ಲಿಕ್‌ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.