ADVERTISEMENT

ಮತಾಂತರ ನಿಷೇಧ ಕಾಯ್ದೆ: ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು

ಪ್ರೀತಿಸುವ ಆಮಿಷವೊಡ್ಡಿ ಇಸ್ಲಾಂ ಧರ್ಮಕ್ಕೆ ಮತಾಂತರ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 2:37 IST
Last Updated 15 ಅಕ್ಟೋಬರ್ 2022, 2:37 IST
ಸೈಯದ್ ಮೋಯಿನ್
ಸೈಯದ್ ಮೋಯಿನ್   

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ಜಾರಿ ಮಾಡಿರುವ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆಯಡಿ (ಮತಾಂತರ ನಿಷೇಧ) ಯಶವಂತಪುರ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಪ್ರೀತಿಸುವ ಆಮಿಷವೊಡ್ಡಿ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದ ಆರೋಪದಡಿ ಸೈಯದ್ ಮೋಯಿನ್ (24) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಯಶವಂತಪುರ ಠಾಣೆ ವ್ಯಾಪ್ತಿಯ ಬಿ.ಕೆ. ನಗರದ ಸೈಯದ್ ಮೋಯಿನ್, ತನ್ನ ಮನೆ ಬಳಿಯ ನಿವಾಸಿಯಾದ 19 ವರ್ಷದ ಹಿಂದೂ ಯುವತಿಯನ್ನು ಮತಾಂತರ ಮಾಡಿದ್ದ. ಯುವತಿ ಪೋಷಕರು ನೀಡಿದ್ದ ದೂರಿನಡಿ, ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆಯಡಿ (ಮತಾಂತರ ನಿಷೇಧ) ಪ್ರಕರಣ ದಾಖಲಿಸಿಕೊಂಡು ಆರೋಪಿ ಯನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ ತಿಳಿಸಿದರು.

ಉತ್ತರ ಪ್ರದೇಶದ ಕುಟುಂಬ: ‘ಯುವತಿಯ ತಂದೆ–ತಾಯಿ, ಉತ್ತರ ಪ್ರದೇಶದವರು. ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಬಿ.ಕೆ.ನಗರದಲ್ಲಿ ನೆಲೆಸಿದ್ದರು. ದಂಪತಿಗೆ ಯುವತಿ ಸೇರಿ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಎಸ್ಸೆಸ್ಸೆಲ್ಸಿವರೆಗೂ ಓದಿದ್ದ ಯುವತಿ, ಅರ್ಧಕ್ಕೆ ಶಾಲೆ ಬಿಟ್ಟು ಮನೆಯಲ್ಲಿದ್ದರು. ಮನೆಗೆ ಅಗತ್ಯವಿದ್ದ ವಸ್ತುಗಳನ್ನು ತರಲು ಅಂಗಡಿಗೆ ಆಗಾಗ ಹೋಗಿ ಬರುತ್ತಿದ್ದರು. ಯುವತಿಯನ್ನು ಹಿಂಬಾ ಲಿಸಿ ಪರಿಚಯ ಮಾಡಿಕೊಂಡಿದ್ದ ಆರೋಪಿ ಸೈಯದ್ ಮೋಯಿನ್, ಹೆಚ್ಚು ಮಾತನಾಡಲಾರಂಭಿಸಿದ್ದ. ಆರೋಪಿ ಹಾಗೂ ಯುವತಿ, ಮೊಬೈಲ್ ನಂಬರ್ ಬದಲಾಯಿಸಿಕೊಂಡು ನಿತ್ಯವೂ ಮಾತನಾಡುತ್ತಿದ್ದರು. ಆರೋಪಿಯೇ ಪ್ರೀತಿಯ ನಿವೇದನೆ ಮಾಡಿದ್ದ. ಆತನ ಆಮಿಷಕ್ಕೆ ಒಳಗಾಗಿ, ಯುವತಿ ಸಹ ಪ್ರೀತಿಸಲಾರಂಭಿಸಿದ್ದರು’ ಎಂದು ಹೇಳಿವೆ.

ಯುವತಿ ಪ್ರೀತಿಸುತ್ತಿರುವ ಸಂಗತಿ 6 ತಿಂಗಳ ಹಿಂದೆಯಷ್ಟೇ ಪೋಷಕರಿಗೆ ಗೊತ್ತಾಗಿತ್ತು. ಸಿಟ್ಟಾಗಿದ್ದ ಪೋಷಕರು, ಯುವತಿಗೆ ಬುದ್ಧಿವಾದ ಹೇಳಿದ್ದರು. ಆದರೂ ಯುವತಿ, ಆರೋಪಿಯನ್ನು ಹಲವು ಬಾರಿ ಭೇಟಿಯಾಗಿದ್ದರು. ಮದುವೆಯಾಗುವುದಾಗಿ ಆಮಿಷ ವೊಡ್ಡಿ ತನ್ನೊಂದಿಗೆ ಆಂಧ್ರಪ್ರದೇಶಕ್ಕೆ ಬರುವಂತೆ ಒತ್ತಾ ಯಿಸಿದ್ದ’ ಎಂದು ಹೇಳಿವೆ.

ನಾಪತ್ತೆ ಬಗ್ಗೆ ದೂರು: ‘ಆರೋಪಿ ಮಾತಿಗೆ ಒಪ್ಪಿದ್ದ ಯುವತಿ, ಆ. 5ರಂದು ಸಂಜೆ ಅಂಗಡಿಗೆ ಹೋಗಿ ಬರುವುದಾಗಿ ಪೋಷಕರಿಗೆ ಹೇಳಿ ಹೋಗಿದ್ದರು. ರಾತ್ರಿಯಾದರೂ ಯುವತಿ ಮನೆಗೆ ವಾಪಸು ಬಂದಿರಲಿಲ್ಲ. ಗಾಬರಿಗೊಂಡ ಪೋಷಕರು, ಹಲವೆಡೆ ಹುಡುಕಾಡಿದ್ದರು. ಸುಳಿವು ಸಿಗದಿದ್ದರಿಂದ, ಮಗಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಆರೋಪಿ ಸೈಯದ್ ಮೋಯಿನ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.