ಬಂಧನ
ಬೆಂಗಳೂರು: ಮನೆಗಳಿಗೆ ಹಾಕಿದ್ದ ಬೀಗ ಒಡೆದು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿ ಪರಾರಿ ಆಗಿದ್ದ ಆರೋಪಿಯನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದೇವಸಂದ್ರದ ಜೆ.ಸಿ.ಲೇಔಟ್‌ನ ರಫೀಕ್(30) ಬಂಧಿತ ಆರೋಪಿ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗೆ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿಯಿಂದ ₹10.80 ಲಕ್ಷ ಮೌಲ್ಯದ 120 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಇಟ್ಟುಮಡುವಿನಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ದೂರುದಾರರು ಡಿಸೆಂಬರ್ 12ರಂದು ತಮ್ಮ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಹನುಮಂತ ನಗರದಲ್ಲಿ ಆಯೋಜಿಸಿದ್ದ ಕರುನಾಡ ಸಂಭ್ರಮಾಚರಣೆಗೆ ತೆರಳಿದ್ದರು. ಮರು ದಿನ ವಾಪಸ್ ಬಂದು ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಚಿನ್ನಾಭರಣ ಕಳ್ಳತನ ಮಾಡಿರುವುದು ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದರು.
ಕತ್ರಿಗುಪ್ಪೆ ತ್ಯಾಗರಾಜ ಸಹಕಾರ ಬ್ಯಾಂಕ್‌ನ ಹಿಂಭಾಗದ ರಸ್ತೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ತನ್ನ ಸಹಚರರ ಜತೆಗೆ ಸೇರಿಕೊಂಡು ಕೃತ್ಯ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
‘ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ಮುಂಬೈನಲ್ಲಿ ನೆಲಸಿದ್ದ ತನ್ನ ಸಂಬಂಧಿಗೆ ಮಾರಾಟ ಮಾಡಿದ್ದ. ಆರೋಪಿಯಿಂದ ಚಿನ್ನಾಭರಣ ಖರೀದಿಸಿದ್ದ ವ್ಯಕ್ತಿಗೆ ನೋಟಿಸ್ ಜಾರಿ ಮಾಡಿ ಠಾಣೆಗೆ ಬರುವಂತೆ ಸೂಚಿಸಲಾಗಿತ್ತು. ಖರೀದಿ ಮಾಡಿದ್ದ ವ್ಯಕ್ತಿ ಚಿನ್ನವನ್ನು ತಂದು ಒಪ್ಪಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.