ADVERTISEMENT

₹30 ಕೊಡದಿದ್ದಕ್ಕೆ ಪತ್ನಿ ಕೊಲೆ: ಪತಿ ಸೆರೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:39 IST
Last Updated 6 ಜುಲೈ 2018, 19:39 IST

ಬೆಂಗಳೂರು: ಮದ್ಯ ಕುಡಿಯಲು ₹30 ಕೊಡಲಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನು ಕೊಲೆ ಮಾಡಿದ ಆರೋಪದಡಿ ರಾಜಾಸಿಂಗ್‌ ಎಂಬಾತನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ರಾಜಾಸಿಂಗ್‌, ಪತ್ನಿ ಕಸ್ತೂರಿ ಹಾಗೂ ಅವರ ಸಹೋದರಿ ಜತೆ ಹತ್ತು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ. ಸೋಲದೇವನಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸಕ್ಕೆ ಸೇರಿದ್ದ. ಪಕ್ಕದ ಶೆಡ್‌ನಲ್ಲೇ ಕುಟುಂಬವು ವಾಸವಿತ್ತು.

’ಹತ್ತು ದಿನಗಳಲ್ಲಿ ಮೂರು ದಿನಗಳು ಮಾತ್ರ ಆರೋಪಿ ಕೆಲಸಕ್ಕೆ ಹೋಗಿದ್ದ. ಏಳು ದಿನ ಕೆಲಸ ಮಾಡಿದ ಬಳಿಕವೇ ವೇತನ ನೀಡುವುದಾಗಿ ಗುತ್ತಿಗೆದಾರರು ಹೇಳಿದ್ದರು. ಗುರುವಾರ ಕೆಲಸಕ್ಕೆ ಹೋಗಿದ್ದ ಆತ, ರಾತ್ರಿ ವಾಪಸ್‌ ಮನೆಗೆ ಬಂದಿದ್ದಾಗಲೇ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮದ್ಯ ಕುಡಿಯಲು ₹30 ಕೊಡುವಂತೆ ಪತ್ನಿಯನ್ನು ಕೇಳಿದ್ದ. ಹಣ ನೀಡಲು ನಿರಾಕರಿಸುತ್ತಿದ್ದಂತೆ ಜಗಳ ತೆಗೆದಿದ್ದ. ಅದೇ ವೇಳೆ ಆರೋಪಿ, ಶೆಡ್‌ನಲ್ಲಿದ್ದ ಹಾಲೊಬ್ರಿಕ್ಸ್ ಇಟ್ಟಿಗೆಯಿಂದ ಪತ್ನಿಯ ತಲೆಗೆ ಹೊಡೆದಿದ್ದ. ತೀವ್ರ ಪೆಟ್ಟು ಬಿದ್ದು ಅವರು ಸ್ಥಳದಲ್ಲೇ ಮೃತಪಟ್ಟರು. ಕಸ್ತೂರಿಯವರ ರಕ್ಷಣೆಗೆ ಹೋಗಿದ್ದ ಸಹೋದರಿ ಮೇಲೂ ಹಲ್ಲೆ ನಡೆಸಿ ಆರೋಪಿ ಪರಾರಿಯಾಗಿದ್ದ. ಘಟನೆ ಸಂಬಂಧ ಮೃತರ ಸಹೋದರಿ ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ರಾಜಾಸಿಂಗ್‌, ಮದ್ಯವ್ಯಸನಿ ಆಗಿದ್ದ. ನಿತ್ಯವೂ ಮನೆಯಲ್ಲಿ ಜಗಳ ಮಾಡುತ್ತಿದ್ದ. ಬೆಂಗಳೂರಿಗೆ ಬಂದಾಗಿನಿಂದಲೂ ಮದ್ಯ ಕುಡಿಯಲು ಕಸ್ತೂರಿ ಅವರಿಂದ ಹಣ ಪಡೆಯುತ್ತಿದ್ದ. ಗುರುವಾರ ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಕೊಲೆ ಮಾಡಿದ’ ಎಂದು ಸಹೋದರಿ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.