ADVERTISEMENT

ಮ್ಯಾಂಡಸ್ ಚಂಡಮಾರುತ: ಕೊಳೆತ ತರಕಾರಿ– ವ್ಯಾಪಾರಿಗಳು ಕಂಗಾಲು

ನಗರದಲ್ಲಿ ನಿರಂತರ ಮಳೆ: ಥಂಡಿ ವಾತಾವರಣದಿಂದ ಹೈರಾಣಾದ ಜನರು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 4:10 IST
Last Updated 13 ಡಿಸೆಂಬರ್ 2022, 4:10 IST
ನಗರದ ಎಂ.ಜಿ. ರಸ್ತೆ–ಕ್ವೀನ್ಸ್‌ ರಸ್ತೆಯ ಜಂಕ್ಷನ್‌ನಲ್ಲಿ ಸಂಗ್ರಹವಾಗಿದ್ದ ಮಳೆಯ ನೀರನ್ನು ಬಿಬಿಎಂಪಿ ಸಿಬ್ಬಂದಿ ಮೋಟರ್‌ ಸಹಾಯದಿಂದ ಹೊರಹಾಕಲು ಪ್ರಯತ್ನಿಸಿದರು
ನಗರದ ಎಂ.ಜಿ. ರಸ್ತೆ–ಕ್ವೀನ್ಸ್‌ ರಸ್ತೆಯ ಜಂಕ್ಷನ್‌ನಲ್ಲಿ ಸಂಗ್ರಹವಾಗಿದ್ದ ಮಳೆಯ ನೀರನ್ನು ಬಿಬಿಎಂಪಿ ಸಿಬ್ಬಂದಿ ಮೋಟರ್‌ ಸಹಾಯದಿಂದ ಹೊರಹಾಕಲು ಪ್ರಯತ್ನಿಸಿದರು   

ಬೆಂಗಳೂರು: ನಗರದಲ್ಲಿ ಸೋಮವಾರ ಬೆಳಿಗ್ಗೆ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದ ಬಳಿಕ ಅಲ್ಲಲ್ಲಿ ಜೋರಾಗಿ ಸುರಿಯಿತು. ಮಧ್ಯಾಹ್ನ 2.30ರಿಂದ ಸಂಜೆ 4ರ ತನಕ ಪೀಣ್ಯ, ಜಾಲಹಳ್ಳಿ, ಯಶವಂತಪುರ, ಗೊರಗುಂಟೆಪಾಳ್ಯ, ದಾಸರಹಳ್ಳಿ, ಹೆಬ್ಬಾಳ, ಕೆ.ಆರ್.ಪುರ, ವಿದ್ಯಾರಣ್ಯಪುರ, ಕಮ್ಮಗೊಂಡನಹಳ್ಳಿ, ಬಿಇಎಲ್‌ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಉಳಿದೆಡೆ ಸಾಧಾರಣ ಮಳೆಯಾಗಿದೆ.

ಸಂಜೆಯ ಬಳಿಕ ವಿಜಯನಗರ, ರಾಜಾಜಿನಗರ, ಕೆಂಗೇರಿ, ಬಸವನಗುಡಿ, ಕೆ.ಆರ್‌.ಮಾರುಕಟ್ಟೆ, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಶಿವಾಜಿನಗರ, ಆರ್‌.ಟಿ.ನಗರ, ಮೇಖ್ರಿ ವೃತ್ತದ ಸುತ್ತಮುತ್ತ ಜೋರು ಮಳೆಯಾಯಿತು. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಸಂಜೆ ವೇಳೆಯಲ್ಲಿ ಜೋರು ಮಳೆಯಾಗುತ್ತಿದ್ದು, ಶಾಲಾ– ಕಾಲೇಜುಗಳಿಂದ ಮನೆಗೆ ತೆರಳಲು ವಿದ್ಯಾರ್ಥಿಗಳು ಪರದಾಡಿದರು. ಮಳೆಯಿಂದ ರಕ್ಷಣೆ ಪಡೆಯಲು ಬಸ್‌ ಶೆಲ್ಟರ್‌ಗಳಲ್ಲಿ ಜನರು ನಿಂತಿದ್ದರು.

ADVERTISEMENT

ಮ್ಯಾಂಡಸ್‌ ಚಂಡಮಾರುತ ಪರಿಣಾಮ ನಗರದಲ್ಲಿ ನಿರಂತರ ಮಳೆಯಾಗಿದ್ದು, ವ್ಯಾಪಾರಸ್ಥರಿಗೆ ಭಾರಿ ನಷ್ಟವಾಗಿದೆ. ಚಿಕ್ಕಪೇಟೆ, ಕೆ.ಆರ್‌.ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿ ಹಾಗೂ ಹಣ್ಣಿನ ವ್ಯಾಪಾರಿಗಳು ತೊಂದರೆಗೆ ಸಿಲುಕಿದ್ದಾರೆ. ಮಳೆಯಿಂದ ಗ್ರಾಹಕರ ಸಂಖ್ಯೆಯೂ ಕಡಿಮೆಯಿತ್ತು. ಮತ್ತೊಂದೆಡೆ ಹಣ್ಣು, ತರಕಾರಿ, ಕೊಳೆಯುತ್ತಿವೆ. ಕೊಳೆತ ಸೊಪ್ಪು ಹಾಗೂ ಟೊಮೆಟೊವನ್ನು ವ್ಯಾಪಾರಿಗಳು ರಸ್ತೆಯ ಬದಿಯಲ್ಲಿ ಎಸೆದು ಹೋಗಿದ್ದಾರೆ.

ಮಳೆ ಬದುಕಿಗೆ ಬರೆ ಹಾಕಿತು ಎಂದು ವ್ಯಾಪಾರಿಗಳು ಕಣ್ಣೀರು ಹಾಕಿದರು. ಮೆಜೆಸ್ಟಿಕ್, ಗಾಂಧಿ ನಗರ, ಚಿಕ್ಕಪೇಟೆಯ ಬೀದಿಬದಿಯ ವ್ಯಾಪಾರಿಗಳು ವ್ಯಾಪಾರವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ.

ಎಂ.ಜಿ.ರಸ್ತೆ-ಕ್ವಿನ್ಸ್‌ ರಸ್ತೆಯ ಜಂಕ್ಷನ್‌ನಲ್ಲಿ ಮಳೆಯ ನೀರು ಸಂಗ್ರಹಗೊಂಡು ಸವಾರರು ಪರದಾಡಿದರು. ಬಿಬಿಎಂಪಿ ಸಿಬ್ಬಂದಿ ಮೋಟರ್‌ ಸಹಾಯದಿಂದ ಮಳೆಯ ನೀರು ಹೊರಹಾಕಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮಳೆ ಹಾಗೂ ಚಳಿಯಿಂದ ವೈರಾಣು ಜ್ವರಕ್ಕೆ ಜನರು ತುತ್ತಾಗುತ್ತಿದ್ದಾರೆ. ನಗರದ ಕ್ಲಿನಿಕ್‌ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಮವಾರ ಹೆಚ್ಚಿನ ಸಂಖ್ಯೆಯ ರೋಗಿಗಳು ಕಂಡುಬಂದರು. ಪುಟ್ಟ ಮಕ್ಕಳು ಜ್ವರದಿಂದ ಬಳಲುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.