ADVERTISEMENT

‘ಹಳ್ಳಿಕಾರ್‌’ ರಾಸು ರಕ್ಷಣೆಗೆ ಮಂಡ್ಯ ಹೈದರ ಪಣ

ಸಂದೀಪ್ ಕೆ.ಎಂ.
Published 18 ನವೆಂಬರ್ 2018, 19:58 IST
Last Updated 18 ನವೆಂಬರ್ 2018, 19:58 IST
ಮಂಡ್ಯದ ಹಳ್ಳಿಕಾರ್ ತಳಿಯ ಹಸು ಜನರ ಗಮನ ಸೆಳೆಯಿತು
ಮಂಡ್ಯದ ಹಳ್ಳಿಕಾರ್ ತಳಿಯ ಹಸು ಜನರ ಗಮನ ಸೆಳೆಯಿತು   

ಬೆಂಗಳೂರು: ಕಿರಿದಾದ ಕೊಂಬು, ಬಲಿಷ್ಠ ಕಾಲುಗಳು, ಉದ್ದನೆಯ ಬಾಲ, ಸೌಮ್ಯ ಸ್ವಾಭಾವ ಹಾಗೂ ಸಣ್ಣ ಮುಖ
ವುಳ್ಳ ದೇಸಿ ತಳಿ ‘ಹಳ್ಳಿಕಾರ್‌’ ಹಸುಗಳು ಕೃಷಿ ಮೇಳದಲ್ಲಿ ರೈತರ ಕಣ್ಮನ ಸೆಳೆದವು.

ರಾಜ್ಯದ ವಿಶಿಷ್ಟ ತಳಿಯಾಗಿರುವ ಹಳ್ಳಿಕಾರ್‌ ಹಸುಗಳನ್ನು ಉಳಿಸಲು ಪಣತೊಟ್ಟಿರುವ ಮಂಡ್ಯ ಜಿಲ್ಲೆಯ ಕಲ್ಲ
ಹಳ್ಳಿಯ ರವಿ ಪಟೇಲ ಸೋದರರು, ಇವುಗಳ ಪ್ರಯೋಜನವನ್ನು ಎಲ್ಲ ರೈತರಿಗೂ ತಿಳಿಸುವ ಹಾಗೂ ತಳಿಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಹಾಲುಹಲ್ಲಿನ ಹಳ್ಳಿಕಾರ್‌ ತಳಿಯ ಲವ–ಕುಶ ಎಂಬ ಹೆಸರಿನ ಜೋಡಿ ಹಸುಗಳನ್ನು ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.

ಹಳ್ಳಿಕಾರ್‌ ತಳಿಯ ಕುರಿತು ಮಾಹಿತಿ ನೀಡಿದ ಅವರು, ‘ಇದರ ಮಾರುಕಟ್ಟೆ ಬೆಲೆ ₹4 ಲಕ್ಷ. ಈ ಹಸು ಒಂದು ದಿನಕ್ಕೆ 5 ರಿಂದ 6 ಲೀಟರ್‌ಗಳಷ್ಟು ಹಾಲು ನೀಡುತ್ತದೆ. ಪ್ರತಿ ಲೀಟರ್‌ ಹಾಲಿಗೆ ಮಾರುಕಟ್ಟೆಯಲ್ಲಿ ₹100 ಬೆಲೆಯಿದೆ. ಇದರಲ್ಲಿ ವಿಟಮಿನ್‌ ಎ, ಬಿ2, ಬಿ3 ಇದ್ದು, ರೋಗನಿರೋಧಕ ಶಕ್ತಿ ಇದರಲ್ಲಿ ಹೆಚ್ಚು ಇರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಹೃದಯದ ಒತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್‌, ಬುದ್ಧಿಮಾಂದ್ಯರಿಗೆ ಈ ಹಸುವಿನ ಹಾಲು ಕುಡಿಯುವಂತೆ ವೈದ್ಯರು ಸೂಚಿಸುತ್ತಾರೆ’ ಎಂದು ರವಿ ಮಾಹಿತಿ ನೀಡಿದರು.

ADVERTISEMENT

‘ಮದುವೆ ಸಂದರ್ಭದಲ್ಲಿ ಹೆಣ್ಣು ಮಗಳಿಗೆ ತವರು ಮನೆಯವರು ಈ ಹಸುಗಳನ್ನು ಬಳುವಳಿಯಾಗಿ ನೀಡುತ್ತಿದ್ದ ಸಂಪ್ರದಾಯವಿತ್ತು. ಈ ಹಸುವಿನ ಹಾಲಿನಿಂದ ತಯಾರಿಸಿದ ಆಹಾರೋತ್ಪನ್ನಗಳು ಮಕ್ಕಳ ಬೆಳವಣಿಗೆಗೆ ಪೂರಕವಾದ ಪೋಷಕಾಂಶ ಒದಗಿಸುತ್ತವೆ. ಯಾವುದೇ ರೀತಿಯ ವಾತಾವರಣಕ್ಕೂ ಈ ಹಸುಗಳು ಒಗ್ಗಿಕೊಳ್ಳುತ್ತವೆ’ ಎಂದರು.

ಶಿವಮೊಗ್ಗ ಜಿಲ್ಲೆಯ ಕೋಣಂದೂರು ಗ್ರಾಮದ ರೈತ ಕಿರಣ್‌ ಭಟ್‌, ‘ಕಳೆದ ವರ್ಷ ನಾನು ಹಳ್ಳಿಕಾರ್‌ ಹಸುವನ್ನು ಖರೀದಿ ಮಾಡಿದ್ದೆ. ಮಲೆನಾಡು ಪ್ರದೇಶಕ್ಕೂ ಈ ರಾಸುಗಳು ಒಗ್ಗಿಕೊಳ್ಳುತ್ತವೆ’ ಎಂದು ತಿಳಿಸಿದರು.

‘ಉಳುಮೆಗೂ ಈ ರಾಸುಗಳನ್ನೆ ಬಳಸುತ್ತೇವೆ. ಬಲಿಷ್ಠವಾದ ಈ ಹಸುಗಳು ಕಡಿಮೆ ಆಹಾರ ಸೇವಿಸಿದರೂ ಕೃಷಿ ಭೂಮಿಯಲ್ಲಿ ಹೆಚ್ಚು ಸಮಯ ದುಡಿಯಬಲ್ಲವು. ಉಳಿದ ರಾಸುಗಳಿಗಿಂತ ವೇಗವಾಗಿ ಕೆಲಸ ಮಾಡುತ್ತವೆ’ ಎಂದರು.

‘ಇವುಗಳ ಸೆಗಣಿಯೂ ರಾಸಾಯನಿಕ ಗೊಬ್ಬರವಾಗಿ ಉಪಯೋಗಿಸಿಕೊಳ್ಳಲು ಸೂಕ್. ಹೆಚ್ಚು ಇಳುವರಿ ಪಡೆಯಲು ಸಹಕಾರಿ’ ಎಂದರು.

4 ತಿಂಗಳ ಕರುವಿಗೆ ₹ 1 ಲಕ್ಷ

‘ನಾಲ್ಕು ತಿಂಗಳ ಕರುವಿಗೆ ಮಾರುಕಟ್ಟೆಯಲ್ಲಿ ₹1 ಲಕ್ಷದವರೆಗೂ ಬೆಲೆಯಿದೆ ಹಾಗೂ ರಾಜ್ಯದಲ್ಲಿ ಹಳ್ಳಿಕಾರ್‌ ತಳಿಯ ರಾಸು ಹೊಂದಿರುವ ರೈತರ ಮಾಹಿತಿ ನಮ್ಮ ಬಳಿ ಇದೆ. ಆಸಕ್ತ ಕೃಷಿಕರಿಗೆ ಈ ಜಾತಿಯ ಕರು ಖರೀದಿಸಲು ಸಹಾಯ ಮಾಡುತ್ತೇವೆ’ ಎಂದು ರವಿ ಪಟೇಲ ತಿಳಿಸಿದರು.

‘ಜೀವಿತಾವಧಿಯಲ್ಲಿ 10 ರಿಂದ 12 ಕರುಗಳನ್ನು ಈ ಹಸು ಹಾಕಬಲ್ಲದು. ಈ ಕರುವು 10 ತಿಂಗಳ ಅವಧಿಯಲ್ಲಿಯೇ ದಷ್ಟಪುಷ್ಟವಾಗಿ ಬೆಳೆಯುವುದು ಈ ತಳಿಯ ವಿಶೇಷ. ರೈತರು ನಾಟಿ ಹಸುವನ್ನು ಸಾಕುವ ಮುಖಾಂತರ ಅಳಿವಿನ ಹಂಚಿನಲ್ಲಿರುವ ಸಂತತಿಯನ್ನು ಉಳಿಸುವುದರ ಜೊತೆಗೆ, ಆದಾಯವನ್ನು ಪಡೆದು, ಆರೋಗ್ಯ ವೃದ್ಧಿಸಿಕೊಳ್ಳಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.