ADVERTISEMENT

ಮ್ಯಾನ್‌ಹೋಲ್‌ಗೆ ಇಳಿಸಿ ಕೆಲಸ: ದೂರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 2:10 IST
Last Updated 12 ಅಕ್ಟೋಬರ್ 2021, 2:10 IST
ಮ್ಯಾನ್‌ಹೋಲ್‌ನಲ್ಲಿ ಇಳಿದು ಕೆಲಸ ಮಾಡುತ್ತಿರುವ ಕಾರ್ಮಕರು
ಮ್ಯಾನ್‌ಹೋಲ್‌ನಲ್ಲಿ ಇಳಿದು ಕೆಲಸ ಮಾಡುತ್ತಿರುವ ಕಾರ್ಮಕರು   

ಬೆಂಗಳೂರು: ಇನ್‌ಫೆಂಟ್ರಿ ರಸ್ತೆಯಲ್ಲಿ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಕೆಲಸ ಮಾಡಿಸಿದ್ದು, ಈ ಸಂಬಂಧ ಸ್ಮಾರ್ಟ್‌ಸಿಟಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಾಮಾಜಿಕ ಕಾರ್ಯಕರ್ತರು ದೂರು ಸಲ್ಲಿಸಿದ್ದಾರೆ.

ಶಿವಾಜಿನಗರ ಉಪನೋಂದಣಾಧಿಕಾರಿ ಕಚೇರಿ ಬಳಿ ಮ್ಯಾನ್‌ಹೋಲ್‌ಗೆ ಸೋಮವಾರ ಕಾರ್ಮಿಕರು ಇಳಿದು ಸ್ವಚ್ಛಗೊಳಿಸುತ್ತಿದ್ದರು. ಅದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತರಾದ ಸ್ವಾತಿ ಶಿವಾನಂದ ಮತ್ತು ವಿನಯ ಕೆ. ಶ್ರೀನಿವಾಸ್ ಅವರು ಪ್ರಶ್ನೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಗುತ್ತಿಗೆದಾರ ಕಂಪನಿ(ಅಮೃತ್ ಕನ್‌ಸ್ಟ್ರಕ್ಷನ್ ಪ್ರೈವೆಟ್‌ ಲಿಮಿಟೆಡ್) ಎಂಜಿನಿಯರ್‌ಗಳು ಉಡಾಫೆಯಿಂದ ವರ್ತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಕಾರ್ಮಿಕರಿಗೆ ಕನಿಷ್ಠ ಸುರಕ್ಷತಾ ಸಲಕರಣೆಗಳನ್ನೂ ನೀಡಿಲ್ಲ. ಗುತ್ತಿಗೆದಾರರ ಸೂಚನೆಯಂತೆ ಇಳಿದು ಕೆಲಸ ಮಾಡುತ್ತಿರುವುದಾಗಿ ಕಾರ್ಮಿಕರು ಉತ್ತರಿಸಿದರು. ಎಂಜಿನಿಯರ್‌ಗಳಾದ ಯೋಗೇಂದ್ರ, ರವಿಕಿರಣ್ ಮತ್ತು ಹರ್ಷಗೌಡ ಅವರನ್ನು ಪ್ರಶ್ನಿಸಿದರೆ ಬೇಜವಾಬ್ದಾರಿಯಿಂದ ವರ್ತಿಸಿದರು. ಸುರಕ್ಷತಾ ಸಲಕರಣೆಗಳನ್ನು ಕೊಟ್ಟರೂ ಮಾರಾಟ ಮಾಡಿಕೊಂಡು ಮದ್ಯ ಸೇವಿಸುತ್ತಾರೆ ಎಂದು ಉಡಾಫೆಯಿಂದ ಉತ್ತರಿಸಿದರು’ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಕಾರ್ಮಿಕರು ಎಂಬ ಕಾರಣಕ್ಕೆ ಎಂಜಿನಿಯರ್‌ಗಳು ಅವರನ್ನು ಕೀಳಾಗಿ ಕಾಣುವುದು ಸರಿಯಲ್ಲ. ಏಕ ವಚನದಲ್ಲಿ ಮಾತನಾಡಿಸುವ ಮೂಲಕ ಅವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿರುವುದು ಕಣ್ಣಾರೆ ಕಂಡಿದ್ದೇವೆ’ ಎಂದು ವಿವರಿಸಿದ್ದಾರೆ.

‘ಈ ಪ್ರಕರಣದ ಸಂಬಂಧ ಕೂಡಲೇ ತನಿಖೆ ನಡೆಸಿ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಕಾರ್ಮಿಕರನ್ನು ಘನತೆಯಿಂದ ನಡೆಸಿಕೊಳ್ಳುವಂತೆ ಎಲ್ಲ ಗುತ್ತಿಗೆದಾರ ಕಂಪನಿಗಳಿಗೆ ನಿರ್ದೇಶನ ನೀಡಬೇಕು. ಕಾರ್ಮಿಕರಿಗೆ ಸುರಕ್ಷತಾ ಸಲಕರಣೆ ವಿತರಿಸಲು ಸೂಚನೆ ನೀಡಬೇಕು. ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಬಗ್ಗೆಯೂ ಎಲ್ಲರಿಗೂ ಮಾಹಿತಿ ನೀಡಬೇಕು. ಕಾರ್ಮಿಕರ ಅಹವಾಲು ಸ್ವೀಕರಿಸಲು ಪ್ರತ್ಯೇಕ ಕೋಶ ತೆರೆಯಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಒಳಚರಂಡಿ ಸಂಪರ್ಕ ಇಲ್ಲ

ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಎಂಜಿನಿಯರ್‌ಗಳು, ‘ಹೊಸದಾಗಿ ನಿರ್ಮಿಸಿರುವ ಈ ಮ್ಯಾನ್‌ಹೋಲ್‌ಗೆ ಇನ್ನೂ ಒಳಚರಂಡಿ ಸಂಪರ್ಕ ಕಲ್ಪಿಸಿಲ್ಲ. ಅದರಲ್ಲಿದ್ದ ಕಸ–ಕಡ್ಡಿಯನ್ನು ಸ್ವಚ್ಛಗೊಳಿಸಲು ಕಾರ್ಮಿಕರನ್ನು ಇಳಿಸಲಾಗಿದೆ. ಅದರಲ್ಲಿ ಒಳ ಚರಂಡಿ ನೀರಿನ ಅಂಶ ಇರಲಿಲ್ಲ. ಹೀಗಾಗಿ, ಸುರಕ್ಷತಾ ಸಲಕರಣೆ ನೀಡಿರಲಿಲ್ಲ. ಆವೇಶದಲ್ಲಿ ಆಡಿದ ಮಾತಿನ ಬಗ್ಗೆ ಕ್ಷಮೆ ಕೇಳಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.