ADVERTISEMENT

‘ಮೂತ್ರಪಿಂಡ ಆರೋಗ್ಯ ಕಡೆಗಣನೆ ಅಪಾಯ’: ಡಾ. ಸುದರ್ಶನ್ ಬಲ್ಲಾಳ್ ಕಳವಳ

ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಕಳವಳ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 16:39 IST
Last Updated 6 ಮಾರ್ಚ್ 2022, 16:39 IST
ಡಾ. ಸುದರ್ಶನ್ ಬಲ್ಲಾಳ್ ಅವರು ಸೈಕ್ಲೋಥಾನ್‌ಗೆ ಚಾಲನೆ ನೀಡಿದರು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.
ಡಾ. ಸುದರ್ಶನ್ ಬಲ್ಲಾಳ್ ಅವರು ಸೈಕ್ಲೋಥಾನ್‌ಗೆ ಚಾಲನೆ ನೀಡಿದರು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.   

ಬೆಂಗಳೂರು:‘ಮೂತ್ರಪಿಂಡದ ಮಹತ್ವದ ಬಗ್ಗೆ ಜನರಿಗೆ ಅಷ್ಟಾಗಿ ಜಾಗೃತಿಯಿಲ್ಲ. ಇದರಿಂದಾಗಿ ಅದರ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸದೇ ಸಮಸ್ಯೆಯನ್ನು ತಂದೊಡ್ಡಿಕೊಳ್ಳುತ್ತಿದ್ದಾರೆ’ ಎಂದುಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಕಳವಳ ವ್ಯಕ್ತಪಡಿಸಿದರು.

ಮಣಿಪಾಲ್ ಆಸ್ಪತ್ರೆಗಳ ಸಮೂಹವು ನಗರದಲ್ಲಿ ಭಾನುವಾರ ಹಮ್ಮಿಕೊಂಡ ಸೈಕ್ಲೋಥಾನ್‌ಗೆ ಚಾಲನೆ ನೀಡಿ, ಮಾತನಾಡಿದರು.‘ಮೂತ್ರಪಿಂಡದ ಸಮಸ್ಯೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಬೇಕು. ಇಲ್ಲವಾದಲ್ಲಿ ಅದರ ಕಾರ್ಯನಿರ್ವಹಣೆ ಕನಿಷ್ಠ ಮಟ್ಟಕ್ಕಿಳಿದು, ದೇಹದಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಹೊರಹಾಕಲು ಅಸಮರ್ಥವಾಗುತ್ತವೆ’ ಎಂದು ಹೇಳಿದರು.

‘ನಮ್ಮ ದೇಹದಲ್ಲಿ ಮಿದುಳು ಮತ್ತು ಹೃದಯದಂತೆ ಮೂತ್ರಪಿಂಡ ಕೂಡ ಸೂಕ್ಷ್ಮವಾದ ಅಂಗ. ರಕ್ತ ಶುದ್ಧಿ ಕಾರ್ಯದ ನಂತರ ಮೂತ್ರದ ಮೂಲಕ ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕಲು ಈ ಅಂಗ ಸಹಕಾರಿ. ದೇಹದಲ್ಲಿನ ಲವಣಾಂಶಗಳು, ನೀರಿನಾಂಶಗಳು, ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಸಮತೋಲನದಲ್ಲಿ ಇರಿಸುತ್ತದೆ. ಹಾಗಾಗಿ, ಮೂತ್ರಪಿಂಡದ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಸಮಸ್ಯೆಯನ್ನು ಪತ್ತೆ ಹಚ್ಚುವುದು ತಡವಾದಲ್ಲಿ ಡಯಾಲಿಸಿಸ್, ಅಂಗಾಂಗ ಕಸಿ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ನಮ್ಮ ಆಸ್ಪತ್ರೆಗಳಲ್ಲಿ ನಾಲ್ಕು ವರ್ಷಗಳಲ್ಲಿ 507 ಮೂತ್ರಪಿಂಡ ಕಸಿ ನಡೆಸಲಾಗಿದೆ. ದಿನಕ್ಕೆ 342 ಡಯಾಲಿಸಿಸ್ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಹಳೆ ವಿಮಾನ ನಿಲ್ದಾಣ ರಸ್ತೆ, ಮಿಲ್ಲರ್ಸ್ ರಸ್ತೆ, ಹೆಬ್ಬಾಳ, ಯಶವಂತಪುರ, ಮಲ್ಲೇಶ್ವರ, ಜಯನಗರ, ಸರ್ಜಾಪುರ ರಸ್ತೆ, ವರ್ತೂರು ರಸ್ತೆ, ವೈಟ್‌ಫೀಲ್ಡ್ ಸೇರಿದಂತೆ ನಗರದ 10 ಕಡೆ ಸೈಕ್ಲೋಥಾನ್ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.