ADVERTISEMENT

ಕೋವಿಡ್: ಆರೋಗ್ಯ ಕಾಳಜಿ ಜತೆಗೆ ಸುರಕ್ಷತೆಗಿರಲಿ ಆದ್ಯತೆ

ಮಲ್ಲೇಶ್ವರದ ಮಣಿಪಾಲ್ ಆಸ್ಪತ್ರೆಯ ವೈದ್ಯರು ಕಿವಿಮಾತು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 4:55 IST
Last Updated 18 ಏಪ್ರಿಲ್ 2021, 4:55 IST
ಕೊರೊನಾ ವೈರಸ್‌ ಸೋಂಕು ಪರೀಕ್ಷೆ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ ಸೋಂಕು ಪರೀಕ್ಷೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ‘ಕೋವಿಡ್ ಕಾಣಿಸಿಕೊಂಡ ಬಳಿಕ ಹಿರಿಯ ನಾಗರಿಕರು ಹೆಚ್ಚಿನ ಸಮಸ್ಯೆ ಎದುರಿಸಿದರು. ಈಗ ಎರಡನೇ ಅಲೆ ಪ್ರಾರಂಭವಾದ ಕಾರಣ ವೃದ್ಧರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಜತೆಗೆ ಸುರಕ್ಷತೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕೋವಿಡ್‌ ಪ್ರಕರಣಗಳು ಇಳಿಕೆ ಕಾಣುವವರೆಗೂ ಆದಷ್ಟು ಮನೆಯಲ್ಲಿಯೇ ಇರಬೇಕು’ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ತಿಳಿಸಿದರು.

ವಿಶ್ವ ಆರೋಗ್ಯ ದಿನದ ಪ್ರಯುಕ್ತ ಮಲ್ಲೇಶ್ವರದ ಮಣಿಪಾಲ ಆಸ್ಪತ್ರೆಯು ‘ಪ್ರಜಾವಾಣಿ’ ಮತ್ತು ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಆಯೋಜಿಸಿದ ವೆಬಿನಾರ್‌ನಲ್ಲಿ ‘ಕೋವಿಡ್ ಸಂದರ್ಭದಲ್ಲಿ ಹಿರಿಯರ ಆರೈಕೆ’ ಎಂಬ ವಿಷಯದ ಮೇಲೆ ತಜ್ಞರು ಚರ್ಚಿಸಿದರು.

‘ಸದ್ಯದ ಪರಿಸ್ಥಿತಿಯಲ್ಲಿ ಹಿರಿಯ ನಾಗರಿಕರು ಮನೆಯಿಂದ ಹೊರಗಡೆ ಓಡಾಡುವುದನ್ನು ಕಡಿಮೆ ಮಾಡಬೇಕು. ಅನಿವಾರ್ಯವಿದ್ದಲ್ಲಿ ಮುಖಗವಸು ಧರಿಸುವುದು ಮತ್ತು ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಕೋವಿಡೇತರ ಕಾಯಿಲೆಗಳಿಗೆ ತೆಗೆದುಕೊಳ್ಳುತ್ತಿರುವ ಔಷಧ ಮುಂದುವರಿಸಬೇಕು. ಜ್ವರ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಯ ಲಕ್ಷಣಗಳು ಗೋಚರಿಸಿದ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಅಗತ್ಯ ಮಾರ್ಗದರ್ಶನ ಪಡೆದುಕೊಳ್ಳಬೇಕು. ಉತ್ತಮ ಪೌಷ್ಟಿಕ ಆಹಾರ ಸೇವಿಸುವ ಜತೆಗೆ ವ್ಯಾಯಾಮ, ಯೋಗ, ಧ್ಯಾನದಂತಹ ಚಟುವಟಿಕೆಗಳಲ್ಲಿ ನಿಯಮಿತವಾಗಿ ತೊಡಗಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಆಸ್ಪತ್ರೆಯ ಆಂತರಿಕ ಔಷಧ ಸಲಹೆಗಾರ ಡಾ. ದಿನೇಶ್ ವಿ. ಕಾಮತ್ ಮಾತನಾಡಿ, ‘ಮಲ್ಲೇಶ್ವರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರಿದ್ದಾರೆ. ಕಳೆದ ವರ್ಷ ಕೋವಿಡ್ ಚಿಕಿತ್ಸೆಯ ನಡುವೆಯೂ ಅವರ ಆರೈಕೆಗೆ ಆದ್ಯತೆ ನೀಡಲಾಯಿತು. ಈಗ ಮತ್ತೆ ಸೋಂಕು ವ್ಯಾಪಿಸಿಕೊಳ್ಳುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಿದೆ. ಫಲಾನುಭವಿಗಳು ಲಸಿಕೆ ಪಡೆದುಕೊಳ್ಳಬೇಕು. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಸಮಸ್ಯೆಗಳು ಇದ್ದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು, ಸಮಸ್ಯೆ ನಿಯಂತ್ರಣಕ್ಕೆ ಬಂದ ಬಳಿಕ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದರು.

ಆಸ್ಪತ್ರೆಯ ಆಂತರಿಕ ಔಷಧ ಸಲಹೆಗಾರ ಡಾ. ಬಸವರಾಜ್ ಕುಂಟೋಜಿ, ‘ಕೋವಿಡ್ ಬಗ್ಗೆ ಭಯಪಡುವ ಬದಲು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಮನೆಯ ಕಿರಿಯ ಸದಸ್ಯರು ವೃದ್ಧರಿಗೆ ನೆರವಾಗಬೇಕು. ಕೋವಿಡ್‌ ಕಾಣಿಸಿಕೊಂಡ ಬಳಿಕ ಹಿರಿಯ ನಾಗರಿಕರು ಹೆಚ್ಚಿನ ಸಮಸ್ಯೆ ಎದುರಿಸಿದ್ದಾರೆ. ಅವರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಮೊಬೈಲ್ ವ್ಯಾನ್ ಮೂಲಕ ಅವರು ಇದ್ದಲ್ಲಿಯೇ ತೆರಳಿ, ವೈದ್ಯಕೀಯ ಸೇವೆ ಒದಗಿಸಿದೆವು. ಜ್ವರ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿದ್ದಲ್ಲಿ ಕೋವಿಡ್ ಲಸಿಕೆ ಪಡೆಯುವಿಕೆಯನ್ನು ಮುಂದೂಡಬೇಕು’ ಎಂದು ಹೇಳಿದರು.

ಜೀವನ ವಿಧಾನ ಬದಲಾಯಿಸಿಕೊಳ್ಳಿ: ಸ್ರೀ ರೋಗ ತಜ್ಞೆ ಡಾ. ಮೀನಾಕ್ಷಿ ಭರತ್, ‘ಮನೆಯಲ್ಲಿನ ಹಿರಿಯ ಸದಸ್ಯರಿಗೆ ಒಬ್ಬಂಟಿ ಭಾವ ಮೂಡದಂತೆ ನೋಡಿಕೊಳ್ಳಬೇಕು. ಯಾವುದೇ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಸ್ವಯಂ ಆರೈಕೆಯ ಬದಲು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಸರಿಯಾಗಿ ಊಟ–ತಿಂಡಿ, ನಿದ್ದೆ ಮಾಡುವ ಜತೆಗೆ ಉತ್ತಮವಾದ ಜೀವನ ವಿಧಾನ ಅಳವಡಿಸಿಕೊಳ್ಳಬೇಕು. ಧಾರ್ಮಿಕ ಸ್ಥಳಗಳು, ದೇವಸ್ಥಾನಗಳಿಗೆ ತೆರಳಲು ಇದು ಸೂಕ್ತ ಸಮಯವಲ್ಲ. ಹಾಗಾಗಿ, ಮನೆಯಲ್ಲಿಯೇ ದೇವರನ್ನು ಪ್ರಾರ್ಥಿಸುವುದು ಉತ್ತಮ’ ಎಂದರು.

‘ಮಲ್ಲೇಶ್ವರದಲ್ಲಿನ ನಿವಾಸಿಗಳಲ್ಲಿ ಶೇ 50ರಷ್ಟು ಮಂದಿ ಹಿರಿಯ ನಾಗರಿಕರಾಗಿದ್ದಾರೆ. ಮಕ್ಕಳು ವಿದೇಶದಲ್ಲಿ ಇರುವ ಕಾರಣ ಏಕಾಂಕಿಯಾಗಿ ಕೆಲವರು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ, ಮನೆ ಆರೈಕೆ ಸೇವೆಗಳು ಅಗತ್ಯವಿದೆ. ವೃದ್ಧರು ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು ಒಡನಾಡಿಗಳು ಹಾಗೂ ಆಪ್ತರ ಜತೆಗೆ ಚರ್ಚಿಸಬೇಕು. ಇಲ್ಲವಾದಲ್ಲಿ ವೈದ್ಯರ ಜತೆಗೆ ಸಮಾಲೋಚನೆ ನಡೆಸಬೇಕು’ ಎಂದು ಮಲ್ಲೇಶ್ವರಮ್ ಸ್ವಾಭಿಮಾನ ಇನಿಷಿಯೇಟಿವ್ ಕಾರ್ಯದರ್ಶಿ ಸುಭಾಷಿಣಿ ಜಗನ್ನಾಥ ಹೇಳಿದರು.

ಹಿರಿಯ ನಾಗರಿಕರಿಗೆ ತಜ್ಞರ ಪ್ರಮುಖ ಸಲಹೆಗಳು

* ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಆಗುವವರೆಗೂ ಆದಷ್ಟು ಮನೆಯಲ್ಲಿಯೇ ಇರಿ.

* ಸಾರ್ವಜನಿಕ ಸ್ಥಳಗಳಿಗೆ ತೆರಳುವುದು ಅನಿವಾರ್ಯವಾದಲ್ಲಿ ಅಂತರ ಕಾಯ್ದುಕೊಳ್ಳಿ.

* ಒಬ್ಬಂಟಿಯಾಗಿ ವಾಸಿಸುತ್ತಿದ್ದಲ್ಲಿ ಅಗತ್ಯ ಸಾಮಗ್ರಿಗಳಿಗೆ ಆರೋಗ್ಯವಂತ ನೆರೆಹೊರೆಯವರ ನೆರವು ಪಡೆಯಿರಿ.

* ಔಷಧ ಸೇರಿದಂತೆ ವಿವಿಧ ಅಗತ್ಯ ವಸ್ತುಗಳು ಬೇಕಾದಲ್ಲಿ ಮನೆಯ ಕಿರಿಯ ಸದಸ್ಯರ ಸಹಾಯ ಪಡೆಯಿರಿ.

* ನಿತ್ಯ ಶಾರೀರಿಕವಾಗಿ ಸಕ್ರೀಯವಾಗಿರಿ.

* ಮನೆಯಲ್ಲಿಯೇ ತಯಾರಿಸಲಾದ ಆರೋಗ್ಯಕರ ಆಹಾರ ಸೇವಿಸಿ.

* ದಿನನಿತ್ಯದ ಮಾತ್ರೆಗಳನ್ನು ತಪ್ಪದೇ ಸೇವಿಸಿ.

* ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ.

* ತುರ್ತಾಗಿ ಹೊರಗಡೆ ಹೋಗಬೇಕಾದರೆ ಮುಖಗವಸು ಧರಿಸಿ.

*ವೈದ್ಯರ ಸಲಹೆ ಇಲ್ಲದೆ ಹೊಸ ಔಷಧಿಗಳನ್ನು ಸೇವಿಸಬೇಡಿ.

*ಜನಸಂದಣಿ ಇರುವ ಮಾರುಕಟ್ಟೆ, ಧಾರ್ಮಿಕ ಸ್ಥಳಗಳಿಗೆ ಹೋಗಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.