ADVERTISEMENT

ಐಎಂಎ: ಮನ್ಸೂರ್ ಖಾನ್‌ ಬಂಧನ 30ರವರೆಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:56 IST
Last Updated 16 ಆಗಸ್ಟ್ 2019, 19:56 IST
   

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೊಹಮದ್‌ ಮನ್ಸೂರ್ ಖಾನ್‌ ನ್ಯಾಯಾಂಗ ಬಂಧನ ಅವಧಿಯನ್ನು ಇದೇ 30ರವರೆಗೆ ವಿಸ್ತರಿಸಲಾಗಿದೆ.

ಮನ್ಸೂರ್‌ ಖಾನ್‌ನನ್ನು ಶುಕ್ರವಾರ ಮಧ್ಯಾಹ್ನ ನಗರದ ಸೆಷನ್ಸ್ ಕೋರ್ಟ್‌ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಖಾನ್ ನ್ಯಾಯಾಂಗ ಬಂಧನ ಅವಧಿಯನ್ನು ಇದೇ 30ರವರೆಗೆ ವಿಸ್ತರಿಸಿ ಆದೇಶಿಸಿದರು.

ವಿಚಾರಣೆ ವೇಳೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪರ ವಕೀಲ ಎಂ.ನಾರಾಯಣ ರೆಡ್ಡಿ, ‘ಮನ್ಸೂರ್ ಖಾನ್‌ ಇ– ಮೇಲ್‌ನಿಂದ ವಶಪಡಿಸಿಕೊಳ್ಳಲಾಗಿರುವ ವಿವರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿಕೊಟ್ಟು ದೃಢಪಡಿಸಿಕೊಳ್ಳಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೆ ಖಾನ್‌ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಅಂತೆಯೇ, ‘ಮನ್ಸೂರ್‌ ಖಾನ್‌ ಎದೆ ನೋವಿನಿಂದ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯ ಅಗತ್ಯವಿದೆ‘ ಎಂದೂ ಪುನರುಚ್ಚರಿಸಿದರು.

ಖಾನ್‌ ಅವರನ್ನು ಕಳೆದ ತಿಂಗಳ 19ರಂದು ಎಸ್‌ಐಟಿ ಅಧಿಕಾರಿಗಳು ದುಬೈನಿಂದ ನವದೆಹಲಿಗೆ ಕರೆತರುತ್ತಿದ್ದಂತೇ ಇ.ಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದರು. ನಂತರ ನಗರದ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.